Gangolli: ಸನ್ಯಾಸಿಬಲ್ಲೆ ಸ್ಮಶಾನಕ್ಕೆ ಸಂಪರ್ಕ ಬಂದ್;ಗುಜ್ಜಾಡಿ ಗ್ರಾ.ಪಂ ಎದುರು ಧರಣಿ
18/07/2025 06:16 PM
ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚುಗೋಡು ಸನ್ಯಾಸಿಬಲ್ಲೆ ಸ್ಮಶಾನ ಹಾಗೂ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಅನಾದಿ ಕಾಲದ ರಸ್ತೆಯನ್ನು ಖಾಸಗಿ ಜಾಗದ ಮಾಲೀಕರು ಬಂದ್ ಮಾಡಿರುವುದನ್ನು ವಿರೋಧಿಸಿ ಸನ್ಮಾಸಿಬಲ್ಲೆ ಗ್ರಾಮಸ್ಥರು ಗುಜ್ಜಾಡಿ ಗ್ರಾಮ ಪಂಚಾಯತ್ ಎದುರು ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದರು. ಈ ವೇಳೆ ಪ್ರತಿಭಟನಾಕಾರರು, ಸ್ಮಶಾನ ಸಂಪರ್ಕಕ್ಕೆ ದಾರಿ ಕಲ್ಪಿಸುವುದರ ಜೊತೆಗೆ ತಪ್ಪಿತಸ್ಥರ ವಿರುದ್ಧ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸುಮಾರು 2 ಶತಮಾನಕ್ಕೂ ಹೆಚ್ಚು ಕಾಲ ಸನ್ಯಾಸಿಬಲ್ಲೆ ಸ್ಮಶಾನ ಹಾಗೂ ನಾಗ ದೇವಸ್ಥಾನ, ರಾಮನಾಥ ಮಹಮ್ಮಾಯಿ ಮತ್ತು ನವದುರ್ಗೆ ದೇವಸ್ಥಾನಕ್ಕೆ ಸಂಪರ್ಕ ಹೊಂದಿರುವ ರಸ್ತೆಯನ್ನು ಖಾಸಗಿ ಜಾಗದ ಮಾಲಕರು ಕಳೆದ ಎರಡು ವರ್ಷಗಳಿಂದ ಬಂದ್ ಮಾಡಿದ್ದಾರೆ. ಸ್ಮಶಾನಕ್ಕೆ ರಸ್ತೆ ಸಂಪರ್ಕ ಇಲ್ಲವಾದುದರಿಂದ ಶವ ಸಂಸ್ಕಾರಕ್ಕೂ ತೊಂದರೆಯಾಗುತ್ತಿದೆ. ಅಲ್ಲದೇ ದೇವಸ್ಥಾನದ ಅಭೀವೃದ್ಧಿಗೂ ತೊಡಕಾಗಿದೆ. ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಕಳೆದ 2ವರ್ಷಗಳಿಂದ ಗುಜ್ಜಾಡಿ ಪಂಚಾಯತ್ಗೆ ಮನವಿ ನೀಡಿ, ಅಲೆದು ಅಲೆದು ಸಾಕಾಗಿದೆ. ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಧರಣಿ ನಿರತರು ಆಗ್ರಹಿಸಿದರು. ಪ್ರತಿಭಟನಾಸ್ಥಳಕ್ಕೆ ಕುಂದಾಪುರ ತಹಶೀಲ್ದಾರ್ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಗಂಗೊಳ್ಳಿ ಠಾಣಾ ಪಿಎಸ್ಐ ಪವನ್ ನಾಯ್ಕ್ ನೇತೃತ್ವದಲ್ಲಿ ಪೊಲೀಸರು ಭದ್ರತೆ ಒದಗಿಸಿದ್ದಾರೆ.