
Nelyadi:ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ;ಗುಡ್ಡ ಕುಸಿದು ಹೆದ್ದಾರಿ ಬಂದ್
17/07/2025 06:05 AM
ಮಂಗಳೂರು-ಬೆ0ಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಮಣ್ಣಗುಂಡಿಯಲ್ಲಿ ಜುಲೈ 17ರಂದು ಮತ್ತೆ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದು, ಹೆದ್ದಾರಿಯೆಲ್ಲಾ ಮಣ್ಣಿನಿಂದ ಮುಚ್ಚಿಹೋಗಿದೆ. ಇದರಿಂದ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ವಾಹನ ಸವಾರರು ಬದಲಿ ಮಾರ್ಗ ಅನುಸರಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ರಸ್ತೆಯ ಚತುಷ್ಪಥ ಕಾಮಗಾರಿಯ ಹಿನ್ನೆಲೆಯಲ್ಲಿ ಅತ್ಯಂತ ಎತ್ತರದ ಗುಡ್ಡವನ್ನು ಯಾವುದೇ ಮುನ್ನೆಚ್ಚರಿಕೆಯ ಕ್ರಮವಿಲ್ಲದೇ ಕತ್ತರಿಸಲಾಗಿದೆ. ಪರಿಣಾಮವಾಗಿ ಮಳೆ ಬರುತ್ತಿದ್ದಂತೆ ಮಣ್ಣು ಸಡಿಲಗೊಂಡು ಕುಸಿದು ಬೀಳುತ್ತಿದೆ.
ಹಲವು ಬಾರಿ ಹೆದ್ದಾರಿ ಬಂದ್ ಆಗುವ ಸ್ಥಿತಿ ನಿರ್ಮಾಣವಾಗಿದೆ. ವಾಹನಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಬದಲಿ ರಸ್ತೆಗಳ ಮೂಲಕ ಸಂಚರಿಸುವ0ತೆ ಪೊಲೀಸರು ತಿಳಿಸಿದ್ದಾರೆ. ಈ ರಸ್ತೆಯನ್ನು ಅವಲಂಬಿಸಿರುವ ಸಾವಿರಾರು ಪ್ರಯಾಣಿಕರು ಹಾಗೂ ವಾಹನ ಸವಾರರು ಆತಂಕದಲ್ಲಿದ್ದಾರೆ. ನೆಲ್ಯಾಡಿ ಹೊರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಸಂಬ0ಧಪಟ್ಟವರು ಮಣ್ಣನ್ನು ಯಂತ್ರಗಳ ಮೂಲಕ ತೆರವುಗೊಳಿಸುವ ಕಾರ್ಯ ನಡೆಸುತ್ತಿದ್ದಾರೆ.