ಡ್ರಗ್ಸ್ ಮಾರಾಟ ಪ್ರಕರಣ; ಬಂಧಿತ ಐವರಿಗೆ 14 ವರ್ಷ ಕಠಿಣ ಸಜೆ
ಸಾರ್ವಜನಿಕರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಆರೋಪದಲ್ಲಿ ಬಂಧಿತರಾಗಿರುವ ಐವರಿಗೆ ಮಂಗಳೂರಿನ ಜಿಲ್ಲಾ ನ್ಯಾಯಾಲಯ ಕಠಿಣ ಸಜೆ ಮತ್ತು ದಂಡ ವಿಧಿಸಿದೆ.
2022ರ ಜೂನ್ 14ರಂದು ಮಂಗಳೂರು ಸಿಸಿಬಿ ಪೊಲೀಸರು ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ನಡೆಸಿ, ವಿದ್ಯಾರ್ಥಿಗಳಿಗೆ ಮಾರಾಟಕ್ಕೆ ಯತ್ನಿಸುತ್ತಿದ್ದ ಪೆಡ್ಲರ್ ಗಳನ್ನು ಬಂಧಿಸಿದ್ದರು. ಈ ವೇಳೆ, 125 ಗ್ರಾಮ್ ಎಂಡಿಎಂಎ ವಶಕ್ಕೆ ಪಡೆಯಲಾಗಿತ್ತು.
ಈ ಬಗ್ಗೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಚಾರ್ಜ್ ಶೀಟ್ ಹಾಕಲಾಗಿತ್ತು. ಒಂದೂವರೆ ವರ್ಷಗಳಿಂದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳ ಆರೋಪ ಸಾಬೀತಾಗಿದೆ ಎಂದು ಹೇಳಿದ್ದು ಇದೀಗ ಶಿಕ್ಷೆ ಪ್ರಮಾಣವನ್ನು ಘೋಷಿಸಿದೆ. ಎನ್ಡಿಪಿಎಸ್ ಸ್ಪೆಷಲ್ ಕೋರ್ಟಿನಲ್ಲಿ ಪೊಲೀಸರ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಮಸ್ಕರೇನಸ್ ವಾದಿಸಿದ್ದರು.
ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳದ ಮಹಮ್ಮದ್ ರಮೀಜ್‌ಗೆ 14 ವರ್ಷ ಕಠಿಣ ಸಜೆ ಮತ್ತು₹ 1.45 ಲಕ್ಷ ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ 6 ತಿ೦ಗಳ ಕಠಿಣ ಸಜೆ. ಉಪ್ಪಳದ ಅಬ್ದುಲ್ ರವೂಫ್ ಅಲಿಯಾಸ್ ಟಫ್ ರವೂಫ್‌ಗೆ 13 ವರ್ಷ ಕಠಿಣ ಸಜೆ ಮತ್ತು ₹1.35 ಲಕ್ಷ ದಂಡ, ದ೦ಡ ಪಾವತಿಸಲು ತಪ್ಪಿದ್ದಲ್ಲಿ 5 ತಿ೦ಗಳ ಕಠಿಣ ಸಜೆ ಹಾಗೂ ದಕ್ಷಿಣ ಸೂಡಾನ್ ದೇಶದ ಲೂಯಲ್ ಡೇನಿಯಲ್ ಜಸ್ಟಿಸ್ ಬೌಲೊ ಅಲಿಯಾಸ್ ಡ್ಯಾನಿ (25), ಕಾಸರಗೋಡು ಉಪ್ಪಳದ ಮೊಹಿಯುದ್ದೀನ್ ರಶೀದ್ (24) ಮತ್ತು ತಮಿಳುನಾಡಿನ ಊಟಿ ಕಟ್ಟೇರಿಯ ಸಬಿತಾ ಅಲಿಯಾಸ್ ಚಿ೦ಚು (25) ಅವರಿಗೆ ತಲಾ 12 ವರ್ಷ ಕಠಿಣ ಸಜೆ ಮತ್ತು ತಲಾ ₹ 1.25 ಲಕ್ಷ ದಂಡ ಹಾಗೂ ದ೦ಡ ಪಾವತಿಸಲು ತಪ್ಪಿದಲ್ಲಿ 4 ತಿ೦ಗಳ ಕಠಿಣ ಸಜೆಯನ್ನು ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜ್ ಆದೇಶ ಮಾಡಿದ್ದಾರೆ.