ಗೋವಾ ನೈಟ್ ಕ್ಲಬ್ ಅಗ್ನಿ ದುರಂತ: ಮಾಲಕರು ಥಾಯ್ಲಾಂಡಿಗೆ ಪರಾರಿ
Tuesday, December 09, 2025
ಗೋವಾದ ಅರ್ಪೋರಾದಲ್ಲಿ ನಡೆದ ಭೀಕರ ಅಗ್ನಿ ದುರಂತದಲ್ಲಿ 25 ಜನರ ಸಾವಿಗೆ ಕಾರಣವಾದ ನೈಟ್‌ಕ್ಲಬ್ ಬರ್ಚ್ ಬೈ ರೊಮಿಯೋ ಲೇನ್ ನ ಮಾಲೀಕರು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಥಾಯ್ಲೆಂಡ್‌ಗೆ ಪಲಾಯನ ಮಾಡಿದ್ದಾರೆ.
ಹೊಟೇಲ್‌ನ ಮಾಲೀಕರಾದ ಸೌರಭ್ ಮತ್ತು ಗೌರವ್ ಲುತ್ರಾ ಥಾಯ್ಲ್ಯಾಂಡ್‌ಗೆ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗೋವಾ ಪೊಲೀಸರು ಇಬ್ಬರನ್ನೂ ಪತ್ತೆಹಚ್ಚಲು ಇಂಟರ್‌ಪೋಲ್‌ನ ಸಹಾಯವನ್ನು ಕೋರಿದ್ದಾರೆ.
ಲುತ್ರಾ ಸಹೋದರರು ಡಿಸೆಂಬರ್ 7ರಂದು ಬೆಳಗ್ಗೆ 5.30ಕ್ಕೆ ಇಂಡಿಗೋ ವಿಮಾನ ಹತ್ತಿ ಫೂಕೆಟ್‌ಗೆ ತೆರಳಿದ್ದರು. ಈ ಪ್ರಯಾಣ ದುರಂತ ಸಂಭವಿಸಿದ ಕೆಲವು ಗಂಟೆಗಳ ಬಳಿಕವೇ ನಡೆದಿದೆ. ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದು, ಮನೆ ವಿಳಾಸಗಳಲ್ಲಿಯೂ ಶೋಧ ನಡೆಸಿದ್ದಾರೆ. ಆದರೆ ಇಬ್ಬರೂ ಅಲ್ಲಿರದ ಕಾರಣ, ಅವರ ಮನೆ ಬಾಗಿಲಿನ ಮೇಲೆ ನೋಟಿಸ್ ಅಂಟಿಸಲಾಗಿದೆ.
ಇಬ್ಬರ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸುವಂತೆ ಗೋವಾ ಪೊಲೀಸರು ಬ್ಯೂರೊ ಆಫ್ ಇಮಿಗ್ರೇಶನ್‌ಗೆ ಮನವಿ ಮಾಡಿಕೊಂಡಿದ್ದರು. ಲುಕೌಟ್ ನೋಟಿಸ್ ನೀಡಿದ ಸಂದರ್ಭದಲ್ಲಿ ಅಧಿಕಾರಿಗಳು ಪ್ರತಿಯೊಂದು ದೇಶದ ವಿಮಾನ ನಿಲ್ದಾಣಗಳ ಹಾಗೂ ಬಂದರುಗಳ ಪ್ರವೇಶ ಮತ್ತು ನಿರ್ಗಮನ ಕೇಂದ್ರಗಳಲ್ಲಿ ನಿಗಾ ಇಡುವಂತೆ ಸೂಚಿಸಿದ್ದಾರೆ.