ಸೌದಿ ಅರೇಬಿಯಾದ ಅಚ್ಚರಿಯ ನಿರ್ಧಾರ: ಮುಸ್ಲಿಮೇತರ ವಿದೇಶಿಯರಿಗೆ ಮದ್ಯ ಖರೀದಿ ಅನುಮತಿ
ಸೌದಿ ಅರೇಬಿಯಾ ತನ್ನ ದೀರ್ಘಕಾಲದ ಕಟ್ಟುನಿಟ್ಟಿನ ಮದ್ಯ ಮಾರಾಟ ನಿಷೇಧವನ್ನು ಸಡಿಲಗೊಳಿಸಿದೆ. ಆದರೆ, ಈ ಅವಕಾಶ ಮುಸ್ಲಿಮರಲ್ಲದ ಆಯ್ದ ವಿದೇಶಿಯರಿಗೆ ಮಾತ್ರ ಲಭ್ಯ. ಮುಸ್ಲಿಮರಲ್ಲದವರು ಮತ್ತು ತಿಂಗಳ ಆದಾಯ ಸುಮಾರು 13,300 ಡಾಲರ್ (ಸುಮಾರು ₹12 ಲಕ್ಷ) ಇರುವವರು, ಈಗ ರಿಯಾದ್‌ನಲ್ಲಿರುವ ದೇಶದ ಏಕೈಕ ಮದ್ಯ ಅಂಗಡಿಗೆ ತೆರಳಿ ಬಿಯರ್ ಖರೀದಿಸಬಹುದು.
ಈ ಬೆಳವಣಿಗೆ, ಇಸ್ಲಾಮಿನ ಪವಿತ್ರ ಭೂಮಿ ಮೆಕ್ಕಾ ಮತ್ತು ಮದೀನಾ ಹೊಂದಿರುವ ದೇಶದಲ್ಲಿನ ಮಹತ್ತರ ಬದಲಾವಣೆಯಾಗಿದೆ. ಕುರಾನಿನ ಬೋಧನೆಯಂತೆ ಬಹುತೇಕ ಮುಸ್ಲಿಮರು ಮದ್ಯದಿಂದ ದೂರವಿರುವಾಗ ಸೌದಿ ಅರೇಬಿಯಾದ ಈ ನಿರ್ಧಾರ ಅಚ್ಚರಿಗೆ ಕಾರಣವಾಗಿದೆ.
ಮದ್ಯವನ್ನು ಖರೀದಿಸಲು ವಿದೇಶಿ ನಿವಾಸಿಗಳು ತಮ್ಮ ಸ್ಯಾಲರಿ ಸ್ಲಿಪ್ ತೋರಿಸಿ ಆದಾಯದ ಪುರಾವೆಯನ್ನು ನೀಡಬೇಕು. ಪ್ರಸ್ತುತ, ಸರಾಸರಿ ತಿಂಗಳ ವೇತನ ಸುಮಾರು 2,750 ಡಾಲರ್ (₹2.47 ಲಕ್ಷ) ಎಂದು ನಿಗದಿಪಡಿಸಲಾಗಿದೆ.
ಸದ್ಯ ಮದ್ಯದ ಅಂಗಡಿ ರಾಜಧಾನಿ ರಿಯಾದ್‌ನ ರಾಜತಾಂತ್ರಿಕ ಪ್ರದೇಶದಲ್ಲಿ ಇದೆ. ಇದು 2024ರ ಜನವರಿಯಲ್ಲಿ ಆರಂಭವಾಯಿತು. ಕಳೆದ 70 ವರ್ಷಗಳ ಬಳಿಕ ಆರಂಭವಾದ ಈ ಅಂಗಡಿ ಮೊದಲು ಕೇವಲ ವಿದೇಶಿ ರಾಜತಾಂತ್ರಿಕರು ಮತ್ತು ಪ್ರೀಮಿಯಂ ರೆಸಿಡೆನ್ಸಿ ಹೊಂದಿರುವ ಉದ್ಯಮಿಗಳು, ಹೂಡಿಕೆದಾರರಿಗೆ ಮಾತ್ರ ತೆರೆಯಲ್ಪಟ್ಟಿತ್ತು. ಆತನಕ ರಾಜತಾಂತ್ರಿಕರು ಕೇವಲ ಸೀಲ್ ಪ್ಯಾಕೇಜ್‌ಗಳಲ್ಲಿ ಮದ್ಯವನ್ನು ಆಮದು ಮಾಡಿಕೊಳ್ಳುತ್ತಿದ್ದರು.
1952ರಲ್ಲಿ ರಾಜ ಅಬ್ದುಲಝೀಝ್ ಅವರ ಪುತ್ರ ಒಬ್ಬ ಬ್ರಿಟಿಷ್ ರಾಜತಾಂತ್ರಿಕನನ್ನು ಮದ್ಯಪಾನದ ನಶೆಯಲ್ಲಿ ಹತ್ಯೆ ಮಾಡಿದ ನಂತರ ಕಠಿಣ ಮದ್ಯ ನಿಷೇಧ ಕಾನೂನು ಜಾರಿಗೊಂಡಿತ್ತು. ಹೊಸ ನೀತಿಯು ಆ ನಿಯಮವನ್ನು ಸಡಿಲಗೊಳಿಸಿದೆ.
ಕಳೆದ ವರ್ಷ ರಿಯಾದ್ ನಲ್ಲಿ ಮದ್ಯದಂಗಡಿ ಆರಂಭಗೊಂಡ ನಂತರ ರಾಜತಾಂತ್ರಿಕರು ಮೊಬೈಲ್ ಆಪ್ ಮೂಲಕ ನೋಂದಾಯಿಸಿಕೊಂಡು ವಿದೇಶಾಂಗ ಸಚಿವಾಲಯದಿಂದ ವಿಶೇಷ ಕೋಡ್ ಪಡೆದು ಮಾಸಿಕ ಖರೀದಿ ಕೋಟಾವನ್ನು ಹೊಂದಿದ್ದರು. ಇದೀಗ, ಉನ್ನತ ಆದಾಯ ಹೊಂದಿರುವ ಮುಸ್ಲಿಮರಲ್ಲದ ವಿದೇಶಿ ನಿವಾಸಿಗಳೂ ಈ ಪಟ್ಟಿಗೆ ಸೇರಲಿದ್ದಾರೆ. ಮುಂದಿನ ದಿನಗಳಲ್ಲಿ ಜೆಡ್ಢಾ ಮತ್ತು ದಹ್ರಾನ್ ನಗರಗಳಲ್ಲಿಯೂ ಹೊಸ ಮದ್ಯದಂಗಡಿಗಳು ತೆರೆಯಲಿವೆ.
ಈ ನಿರ್ಧಾರವು, ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ‘ವಿಷನ್ 2030’ ಆರ್ಥಿಕ ಸುಧಾರಣಾ ಯೋಜನೆಯ ಭಾಗವಾಗಿದೆ. ಸೌದಿ ಅರೇಬಿಯಾ ತೈಲಾಧಾರಿತ ಆರ್ಥಿಕತೆಯಿಂದ ಹೊರಬಂದು ಪ್ರವಾಸೋದ್ಯಮ ಹಾಗೂ ಅಂತರರಾಷ್ಟ್ರೀಯ ವ್ಯವಹಾರಗಳಿಗೆ ತೆರೆದುಕೊಳ್ಳುವ ಪ್ರಯತ್ನದಲ್ಲಿದೆ. 2034ರಲ್ಲಿ ನಡೆಯಲಿರುವ ಫಿಫಾ ಫುಟ್ಬಾಲ್ ವಿಶ್ವಕಪ್‌ನ ಆತಿಥ್ಯವೂ ಸೌದಿ ಅರೇಬಿಯಾಗೆ ಲಭಿಸಿದೆ.