ನಿಲ್ಲಿಸಿದ್ದ ಲಾರಿಯಿಂದ ಕಾಫಿಬೀಜ ಕಳವುಗೈದ ಆರೋಪಿಗಳ ಬಂಧನ
Tuesday, December 09, 2025
ಮೈಸೂರಿನ ಪಿರಿಯಾಪಟ್ಟಣದಿಂದ ಮಂಗಳೂರಿನ ಬಂದರಿಗೆ ಕಾಫಿ ಬೀಜಗಳನ್ನು ಸಾಗಿಸುತ್ತಿದ್ದ ಲಾರಿಯಿಂದ 21.44 ಲಕ್ಷ ರೂಪಾಯಿ ಮೌಲ್ಯದ 88 ಗೋಣಿ ಕಾಫಿ ಬೀಜಗಳನ್ನು ಕಳವುಗೈದ ಐದು ಮಂದಿ ಆರೋಪಿಗಳನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರಿನ ಪರ್ನಾಜೆಯ ಆಶ್ಲೇಷ ಭಟ್, ರಿಕ್ಷಾ ಚಾಲಕರಾದ ನಾರಾಯಣ ಶೆಟ್ಟಿಗಾರ್, ಮಿಥುನ್ ಕುಮಾರ್, ಸುಳ್ಯ ನಿವಾಸಿ ಅಶ್ರಫ್ ಮತ್ತು ವಿಜಯ್ ಶೆಟ್ಟಿ ಬಂಧಿತರು.
ಪುತ್ತೂರು ನೆಹರೂ ನಗರ ಶೇವಿರೆ ನಿವಾಸಿ ತೃತೇಶ್ ಎಂಬವರು ಪಿರಿಯಾಪಟ್ಟಣದಿಂದ ಮಂಗಳೂರು ಬಂದರಿಗೆ 320 ಗೋಣಿ ಕಾಫಿ ಬೀಜಗಳನ್ನು ಬುಕ್ಕಿಂಗ್ ಮಾಡಿದ್ದರು. ಲಾರಿಯಲ್ಲಿ ಕಾಫಿ ಬೀಜಗಳನ್ನು ಸಾಗಿಸುವ ವೇಳೆ ಡಿ. 3ರಂದು ಪುತ್ತೂರಿನಲ್ಲಿ ಲಾರಿ ನಿಲ್ಲಿಸಿ ಮನೆಗೆ ತೆರಳಿದ್ದರು. ಈ ವೇಳೆ ಕೆಲ ಕಾಫಿ ಬೀಜಗಳ ಗೋಣಿಗಳನ್ನು ಕಳ್ಳರು ಕಳವುಗೈದಿದ್ದರು. ಈ ಬಗ್ಗೆ ಪುತ್ತೂರು ಠಾಣೆಯಲ್ಲಿ ದೂರು ದಾಲಾಗಿತ್ತು. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ. ಕಳವುಗೈದ ಕಾಫಿ ಬೀಜಗಳನ್ನು ಗೋಣಿಕೊಪ್ಪದ ನಾಸೀರ್ ಎಂಬವರಿಗೆ ಸೇರಿದ ಗೋದಾಮಿನಿಂದ ವಶಕ್ಕೆ ಪಡೆಯಲಾಗಿದೆ.