ಡ್ರಗ್ಸ್ ಮಾರಾಟಕ್ಕೆ ಯತ್ನ ; ನಾಲ್ವರು ಡ್ರಗ್ ಪೆಡ್ಲರ್ ಗಳ ಬಂಧನ
ಮಂಗಳೂರು ನಗರದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕುಂದಾಪುರದ ಮೊಹಮ್ಮದ್ ಶಿಯಾಬ್, ಉಳ್ಳಾಲದ ಮೊಹಮ್ಮದ್ ನೌಷದ್ ಮಂಗಳೂರಿನ ಇಮ್ರಾನ್ ಮತ್ತು ಬಂಟ್ವಾಳದ ನಿಸಾರ್ ಅಹಮ್ಮದ್ ಎಂದು ಗುರುತಿಸಲಾಗಿದೆ.
ಬಂಧಿತರಿಂದ ಸುಮಾರು 50 ಲಕ್ಷ ಮೌಲ್ಯದ 517.76 ಗ್ರಾಂ ಎಂ.ಡಿ.ಎಂ.ಎ ಡ್ರಗ್ಸ್ ನ್ನು ವಶಪಡಿಸಿಕೊಂಡಿದ್ದಾರೆ. ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಂದರಾಮ್ ಶೆಟ್ಟಿ ಕನ್ವೆನ್ಷನ್ ಹಾಲ್ ಬಳಿ ಆರೋಪಿಗಳು ಕಾರಿನಲ್ಲಿ ಮಾದಕವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು, ಈ ವೇಳೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಅವರಿಂದ ಸುಮಾರು 50 ಲಕ್ಷ ಮೌಲ್ಯದ 517.76 ಗ್ರಾಂ ಎಂ.ಡಿ.ಎಂ.ಎ. ಮಾದಕ ವಸ್ತು, ಕೃತ್ಯಕ್ಕೆ ಬಳಸಿದ 10 ಲಕ್ಷ ಮೌಲ್ಯದ ಕಾರು ಹಾಗೂ 5 ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಮಾದಕ ವಸ್ತುವನ್ನು ಆರೋಪಿಗಳು ಬೆಂಗಳೂರಿನಲ್ಲಿ ಒಬ್ಬ ನೈಜೀರಿಯಾ ದೇಶದ ವ್ಯಕ್ತಿಯಿಂದ ತಂದು ಮಂಗಳೂರು ನಗರದ್ಯಾಂತ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಪೂರೈಕೆ ಮಾಡಲು ಯೋಜನೆ ಹಾಕಿಕೊಂಡಿದ್ದರು. ಸಿ.ಸಿ.ಬಿ. ಘಟಕದ ಎ.ಸಿ.ಪಿ. ಮನೋಜ್ ಕುಮಾರ್ ನಾಯ್ಕ್ ರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.