ಋತುಚಕ್ರ ರಜೆ ನೀಡುವ ರಾಜ್ಯಸರ್ಕಾರದ ಅಧಿಸೂಚನೆಗೆ ಹೈಕೋರ್ಟ್ ತಡೆ
ರಾಜ್ಯದ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಕಾರ್ಮಿಕರಿಗೆ ವೇತನ ಸಹಿತ ಋತು ಚಕ್ರ ರಜೆ ಒದಗಿಸುವ ರಾಜ್ಯಸರ್ಕಾರದ ಅಧಿಸೂಚನೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
2025ರ ನವೆಂಬರ್ 20ರಂದು ರಾಜ್ಯ ಕಾರ್ಮಿಕ ಇಲಾಖೆ ಹೊರಡಿಸಿದ ಅಧಿಸೂಚನೆಯನ್ನು ಪ್ರಶ್ನಿಸಿ ಬೆಂಗಳೂರಿನ ಹೊಟೇಲ್‌ಗಳ ಸಂಘ ಹೈಕೋರ್ಟ್ ಮೊರೆ ಹೋಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೂಲಿಮನಿ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಇಂದು(ಡಿ. 9) ವಿಚಾರಣೆ ನಡೆಸಿದೆ.
ಹೋಟೇಲ್ ಸಂಘದ ಪರ ವಕೀಲ ಬಿ.ಕೆ ಪ್ರಶಾಂತ್ ವಾದ ಮಂಡಿಸಿ, ಫ್ಯಾಕ್ಟರಿ ಕಾಯ್ದೆ ಪ್ರಕಾರ 20 ದಿನಗಳ ದುಡಿಮೆಗೆ ಒಂದು ಗಳಿಕೆ ರಜೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಇದರ ಪ್ರಕಾರ ವರ್ಷಕ್ಕೆ 18 ರಜೆ ನೀಡಲಾಗುತ್ತಿದೆ. ಅಂಗಡಿ ಮತ್ತು ಕಮರ್ಷಿಯಲ್ ಸಂಸ್ಥೆಗಳು 18 ದಿನಗಳ ಗಳಿಕೆ ರಜೆಯ ಜೊತೆಗೆ 12 ದಿನ ಅನಾರೋಗ್ಯ ರಜೆ ನೀಡುತ್ತಿವೆ. 12 ಸಾಂದರ್ಭಿಕ ರಜೆಗಳೂ ಇವೆ. ಆದರೆ, ಯಾವುದೇ ರಾಜ್ಯ ಅಥವಾ ಕೇಂದ್ರ ಸರಕಾರದ ಕಾಯ್ದೆಯಲ್ಲಿ ಋತುಚಕ್ರದ ರಜೆ ಕಡ್ಡಾಯಗೊಳಿಸಿಲ್ಲ. ಋತುಚಕ್ರದ ರಜೆ ನೀಡಲು ಕಾಯ್ದೆಯ ಯಾವುದೇ ನಿಬಂಧನೆಯಲ್ಲೂ ಅವಕಾಶವಿಲ್ಲ. ಯಾವ ಅಧಿಕಾರದ ಅಡಿ ಸರಕಾರ ಅಧಿಸೂಚನೆ ಹೊರಡಿಸಿದೆ ಎಂಬುದನ್ನೂ ಅಧಿಸೂಚನೆಯಲ್ಲಿ ಉಲ್ಲೇಖವಾಗಿಲ್ಲ ಎಂದು ಆಕ್ಷೇಪಿಸಿದರು.
ಈ ವೇಳೆ ನ್ಯಾಯಪೀಠ, ಅಧಿಸೂಚನೆ ಹೊರಡಿಸುವಾಗ ರಾಜ್ಯ ಸರಕಾರ ಸಂಬ0ಧಿತ ಸಂಸ್ಥೆಗಳ ಜತೆ ಸಭೆ ನಡೆಸಿದೆಯೇ? ಅವುಗಳಿಂದ ಆಕ್ಷೇಪ ಸ್ವೀಕರಿಸಲಾಗಿದೆಯೇ ಎಂದು ಪ್ರಶ್ನಿಸಿತು. ಅದಕ್ಕೆ ವಕೀಲ ಪ್ರಶಾಂತ್ ಇಲ್ಲ ಎಂದರು.
ಈ ನಡುವೆ ಬೇರೆ ಯಾವುದೇ ವಕೀಲರಿಗೆ ವಾದ ಮಂಡಿಸಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಪೀಠ, ಸರಕಾರದ ಅಧಿಸೂಚನೆಗೆ ತಡೆ ನೀಡಿ, ಅರ್ಜಿ ವಿಚಾರಣೆ ಮುಂದೂಡಿತು.
ಈ ಬಗ್ಗೆ ಕಾರ್ಮಿಕ ಇಲಾಖೆಗೆ ನೋಟೀಸ್ ಜಾರಿಗೊಳಿಸಿದ್ದು, ಆಕ್ಷೇಪ ಸಲ್ಲಿಸಲು ಸೂಚಿಸಿದೆ.