ಗುಡಿಸಲಿನಲ್ಲಿ ವಾಸವಿದ್ದ ಒಂದೇ ಕುಟುಂಬದ ಮೂವರ ರಕ್ಷಣೆ (Video)
ನಾಗರಿಕ ಸಮಾಜದ ಸಂಪರ್ಕವಿಲ್ಲದೇ ಮೂಡುಬೆಳ್ಳೆಯ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದ ವೃದ್ಧ ದಂಪತಿ ಹಾಗೂ ಅವರ ಮಾನಸಿಕ ಅಸ್ವಸ್ಥ ಮಗಳನ್ನು ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ನೇತೃತ್ವದಲ್ಲಿ ರಕ್ಷಿಸಲಾಗಿದೆ.
ಮೂಡುಬೆಳ್ಳೆಯ ಶಿಥಿಲಾವಸ್ಥೆಯಲ್ಲಿದ್ದ ಮನೆಯಲ್ಲಿ ವಾಸವಿದ್ದ 80 ವರ್ಷ ಪ್ರಾಯದ ಎಡ್ವಿನ್ ಅಮ್ಮಣ್ಣ, ಪತ್ನಿ ಜ್ಯೋತಿ ಅಮ್ಮಣ್ಣ ಹಾಗೂ ಅವರ 40 ವರ್ಷ ಪ್ರಾಯದ ಮಾನಸಿಕ ಅಸ್ವಸ್ಥೆ ಮಗಳನ್ನು ರಕ್ಷಿಸಲಾಗಿದೆ.
ರಕ್ಷಿಸಲ್ಪಟ್ಟ ಮೂವರು ಕೂಡಾ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರೆಂದು ತಿಳಿದುಬಂದಿದೆ. ಕಾರ್ಕಳದ ಹೊಸಬೆಳಕು ಆಶ್ರಮದ ಸಂಚಾಲಕಿ ತನುಲಾ ತರುಣ್ ಮೂವರಿಗೆ ಆಶ್ರಯ ಒದಗಿಸಿದ್ದಾರೆ. ಈ ಮೂವರನ್ನು ಆಪ್ತ ಸಮಾಲೋಚನೆ ನಡೆಸಿದಾಗ ವೃದ್ಧರು ಮನೆಯಲ್ಲಿ ಚಿನ್ನಾಭರಣಗಳು ಇರುವುದಾಗಿ ಹೇಳಿಕೊಂಡಿದ್ದರು. ಇಲಾಖೆಯ ಸಮಕ್ಷಮದಲ್ಲಿ ಹುಡುಕಾಟ ನಡೆಸಿ ಚಿನ್ನಾಭರಣಗಳನ್ನು ಅವರ ವಶಕ್ಕೆ ನೀಡಲಾಗಿದೆ.
ಕಾರ್ಯಚರಣೆಯಲ್ಲಿ ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಗ್ರಾಮ ಪಂಚಾಯತ್ ಅಧ್ಯಕ್ಷೆ ದಿವ್ಯ ವಿ. ಆಚಾರ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾಲತಾ ಮೂಡುಬೆಳ್ಳೆ, ಶಿರ್ವ ಪೋಲಿಸ್ ಠಾಣಾಧಿಕಾರಿ ವಿನ್ಸೆಂಟ್ ಫೆರ್ನಾಂಡಿಸ್, ಎಸ್.ಐ ಮಂಜುನಾಥ್, 112 ಸಹಾಯವಾಣಿ ಕೇಂದ್ರದ ಎ.ಎಸ್.ಐ ಗಂಗಾಧರ, ಹೊಸಬೆಳಕು ಆಶ್ರಮದ ಮೇಲ್ವಿಚಾರಕ ಗೌರೀಶ್, ರವಿರಾಜ್ ಆಚಾರ್ಯ, ಸುಧಾಕರ್ ಪೂಜಾರಿ, ಧನಲಕ್ಷ್ಮಿ ಪೂಜಾರಿ ಮೂಡುಬೆಳ್ಳೆ, ವಿಜಯಪ್ರಕಾಶ್ ಮೂಡುಬೆಳ್ಳೆ, ಪ್ರಕಾಶ್ ಮೂಡುಬೆಳ್ಳೆ ಭಾಗಿಯಾಗಿದ್ದರು.