ಬೈಂದೂರಿನ ಹುಂತನಗೋಳಿ ಸಂಪರ್ಕ ಸೇತುವೆ ರಸ್ತೆಗೆ ಮತ್ತೆ ವಿಘ್ನ...!
ಬೈಂದೂರು ತಾಲೂಕಿನ ಹೇರೂರು ಗ್ರಾಮದ ಹುಂತನಗೋಳಿ ಗ್ರಾಮದಲ್ಲಿ ಹರಿಯುವ ಸೌರ್ಪಣಿಕಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕಿಂಡಿ ಅಣೆಕಟ್ಟಿನ ಸಂಪರ್ಕ ಸೇತುವೆಗೆ ವಿಘ್ನ ಎದುರಾಗಿದೆ. ಹಲವು ದಶಕಗಳ ಬೇಡಿಕೆ ಸ್ಪಂದಿಸಿ ನಿರ್ಮಿಸಿರುವ ರಸ್ತೆಯನ್ನು ಇದೀಗ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.
ಹಲವು ವರ್ಷಗಳಿಂದ ಗ್ರಾಮದ ಮಧ್ಯೆ ಹರಿಯುವ ಸೌಪರ್ಣಿಕಾ ನದಿ ದಾಟುವುದೇ ಕಷ್ಟದ ಸಾಧ್ಯವಾಗಿತ್ತು. ಅರಣ್ಯ ತಪ್ಪಲಿನ ಈ ಪ್ರದೇಶ ಹೇರೂರು ಮತ್ತು ಆಲೂರು ಗ್ರಾಮದ ನಡುವೆ ಇರುವ ಹೇರೂರು ಹುಂತನಗೋಳಿಯಲ್ಲಿರುವ ಶ್ರಿ ದುರ್ಗಾಪರಮೇಶ್ವರಿ ದೇಗುಲ 2 ಗ್ರಾಮಗಳ ಆರಾಧ್ಯ ಕ್ಷೇತ್ರವಾಗಿದ್ದು, ಸೇತುವೆ ಇಲ್ಲದ ಕಾರಣ ದೇವರ ದರ್ಶನಕ್ಕೆ ಬರಲು ಆಲೂರು ಗ್ರಾಮಸ್ಥರು ಹರಸಾಹಸಪಡಬೇಕಾದ ಪರಿಸ್ಥಿತಿ ಇತ್ತು. ಕೃಷಿ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿರುವ ಇಲ್ಲಿನ ನಿವಾಸಿಗಳು ಕೂಲಿಗೋಸ್ಕರ ಆಲೂರು, ಹೇರೂರು, ಹುಂತನಗೋಳಿಗೆ ತೆರಳುತ್ತಾರೆ. ಹೊಳೆ ಈಚೆಗಿನ ಹುಂತನಗೋಳಿ ಜನರಿಗೆ ಆಲೂರು ಪೇಟೆ ಸನಿಹದ ಪ್ರದೇಶ. ಆಸ್ಪತ್ರೆ, ಶಾಲೆ ಇನ್ನಿತರ ದೈನಂದಿನ ಅವಶ್ಯಕತೆಗೆ ಆಲೂರು ಪೇಟೆ ನೆಚ್ಚಿಕೊಂಡಿದ್ದ ಇಲ್ಲಿನ 100ಕ್ಕೂ ಅಧಿಕ ಕುಟುಂಬಗಳು ನೆಲೆಸಿದೆ. ಹೇರೂರು ಬಹಳ ದೂರ ಆಗುವುದರಿಂದ ಸಂಪರ್ಕ ಸೇತುವೆ ನಿರ್ಮಿಸುವಂತೆ ಬೇಡಿಕೆ ಸಲ್ಲಿಸಿ, ಕೊನೆಗೆ ಸರಕಾರ ಕಿಂಡಿ ಅಣೆಕಟ್ಟು ಜೊತೆಗೆ ಸಂಪರ್ಕ ಸೇತುವೆ ನಿರ್ಮಿಸಿತ್ತು. ಆದರೆ ಈ ಸಂಪರ್ಕ ರಸ್ತೆಯನ್ನು ಈಗ ಮತ್ತೆ ಬಂದ್ ಮಾಡಲಾಗಿದೆ.
ಸ್ಥಳೀಯರೋರ್ವರ ಸೇರಿದ ಜಾಗದಲ್ಲಿ ರಸ್ತೆ ಇದೆ ಎಂದು ನಡೆದಾಡುವ ರಸ್ತೆಗೆ ಗೇಟ್ ಅಳವಡಿಸಿರುವುದು ಪ್ರತಿಭಟನೆಗೆ ಕಾರಣವಾಗಿದೆ. ಗ್ರಾಮಸ್ಥರು ಹಲವು ವರ್ಷಗಳಿಂದ ಬಳಸುತ್ತಿದ್ದ ಹುಂತನಗೋಳಿ ರಸ್ತೆ ಬಂದ್ ಮಾಡಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳೀಯರ ಪ್ರಕಾರ ಸ್ಥಳೀಯ ಆಲೂರು ಪಂಚಾಯತ್ ಹುಂತನಗೋಳಿ ಸಂಪರ್ಕ ರಸ್ತೆ ಅಭಿವೃದ್ಧಿ ಮಾಡಿದ್ದು, ನೀರಿನ ಹರಿವಿಗೆ ಅನುಕೂಲವಾಗುವಂತೆ ಮೋರಿ ಹಾಕಲಾಗಿತ್ತು, ಆದರೆ ರಸ್ತೆ ಜಾಗ ಪಟ್ಟ ಭೂಮಿಯಲ್ಲಿದೆ ಎಂದು ವಾದಿಸುತ್ತಿರುವ ಸ್ಥಳೀಯರೊಬ್ಬರು ಇಲ್ಲಿ ರಸ್ತೆ ಸಂಚಾರಕ್ಕೆ ಅವಕಾಶ ಇಲ್ಲ ಎಂದು ಗೇಟ್ ಅಳವಡಿಸಿದ್ದಾರೆ. ಅಲ್ಲದೆ ನೀರಿನ ಹರಿವಿಗೆ ಹಾಕಲಾಗಿದ್ದ ಮೋರಿಯನ್ನು ಕೂಡ ಒಡೆದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಗೆ ಸ್ಥಳೀಯರು ದೂರು ನೀಡಿದ ಪರಿಣಾಮ ಠಾಣಾಧಿಕಾರಿ ಪವನ್ ನಾಯಕ್ ಸ್ಥಳಕ್ಕೆ ಆಗಮಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಗ್ರಾಮ ಪಂಚಾಯತ್ ಮತ್ತು ಕಂದಾಯ ಇಲಾಖೆಯ ಸಹಕಾರದೊಂದಿಗೆ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳುವಂತೆ ಸೂಚನೆ ನೀಡಿದರು. ಈ ವೇಳೆ ರಸ್ತೆ ಬಂದ್ ಮಾಡಿದ ಸ್ಥಳೀಯ ವ್ಯಕ್ತಿ ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆಯಿತು. ಈ ಹಿಂದಿನಿಂದಲೂ ನಡೆದಾಡುತ್ತಿದ್ದ ಸಂಪರ್ಕ ರಸ್ತೆಯನ್ನೇ ತೆರವು ಮಾಡಬೇಕು ಹೊಸದಾಗಿ ನಿರ್ಮಿಸಿರುವ ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲ ಅತ್ಯಂತ ಅಪಾಯಕಾರಿ ಯಾಗಿರುವ ರಸ್ತೆಯಲ್ಲಿ ರಾತ್ರಿ ವೇಳೆ ಸಂಚರಿಸುವುದು ಕಷ್ಟದ ಕೆಲಸ ನಮಗೆ ಮೊದಲಿನ ರಸ್ತೆಯನ್ನೇ ನೀಡಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

