ಉಡುಪಿಯ ಉದ್ಯಮಿಗೆ 33 ಕೋಟಿ ರೂ.ವಂಚನೆ: ಸಿಂಗಾಪುರ ಕಂಪನಿ ಸಿಇಓ ಸೇರಿ ಐವರ ವಿರುದ್ಧ ದೂರು
ಸಾಫ್ಟ್‌ವೇರ್ ಉತ್ಪನ್ನವೊಂದನ್ನು ಖರೀದಿಸುವ ನೆಪದಲ್ಲಿ ಉಡುಪಿಯ ಉದ್ಯಮಿಯೊಬ್ಬರಿಗೆ ಬರೋಬ್ಬರಿ 33 ಕೋಟಿ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಸಿಂಗಾಪುರ ಮೂಲದ ಕಂಪನಿಯ ಸಿಇಓ ಸೇರಿದಂತೆ ಐವರು ಪದಾಧಿಕಾರಿಗಳ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಶಿವಳ್ಳಿ ಗ್ರಾಮದ ನಿವಾಸಿ ದೀಲಿಪ್ ಆರ್. ಅಡಿಗ (35) ಅವರು ಲಕ್ಷ್ಮೀಂದ್ರ ನಗರದಲ್ಲಿ ‘ಎಮ್ ಎನ್ ಶೆಟ್ಟಿ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್’ ಎಂಬ ಕಂಪನಿಯನ್ನು ನಡೆಸುತ್ತಿದ್ದಾರೆ. ಸಿಂಗಾಪುರದ ‘ಇನ್ಫೋಮೋ ಗ್ಲೋಬಲ್’ (Infomo Global Pvt Ltd) ಕಂಪನಿಯ ಸಿಇಓ ಆನಂದರಾವ್ ಎಂಬವರು ದಿಲೀಪ್ ಅವರಿಗೆ ಕರೆ ಮಾಡಿ, ಅವರ ಕಂಪನಿಯ ಸಿ.ಎಂ.ಎಸ್ ಪ್ರೊಡಕ್ಟ್ ಖರೀದಿಸಲು ಆಸಕ್ತಿ ವ್ಯಕ್ತಪಡಿಸಿದ್ದರು.
2019ರ ಅಕ್ಟೋಬರ್‌ನಲ್ಲಿ ನಡೆದ ಮಾತುಕತೆಯಂತೆ, 35 ಲಕ್ಷ ರೂಪಾಯಿ ನಗದು ಮತ್ತು ಇನ್ಫೋಮೋ ಕಂಪನಿಯ 17.5 ಲಕ್ಷ ಶೇರ್‌ಗಳನ್ನು ನೀಡುವುದಾಗಿ ಆನಂದರಾವ್ ಭರವಸೆ ನೀಡಿದ್ದರು. ಈ ಶೇರ್‌ಗಳ ಮೌಲ್ಯ ಮೂರು ವರ್ಷಗಳಲ್ಲಿ 33 ಕೋಟಿ ರೂಪಾಯಿ ಆಗಲಿದೆ ಮತ್ತು ಕಂಪನಿಯ ಒಟ್ಟು ಮೌಲ್ಯ 9 ಸಾವಿರ ಕೋಟಿ ರೂಪಾಯಿ ದಾಟಲಿದೆ ಎಂದು ಸುಳ್ಳು ಮಾಹಿತಿ ನೀಡಿ ನಂಬಿಸಿದ್ದರು ಎನ್ನಲಾಗಿದೆ. ಏಪ್ರಿಲ್ 2020ರಲ್ಲಿ ಎರಡೂ ಕಂಪನಿಗಳ ನಡುವೆ ಒಪ್ಪಂದ ನಡೆದಿತ್ತು. ಅದರಂತೆ ದೀಲಿಪ್ ಅಡಿಗ ಅವರು ತಮ್ಮ ಸಾಫ್ಟ್‌ವೇರ್ ಉತ್ಪನ್ನವನ್ನು ಸಿಂಗಾಪುರ ಕಂಪನಿಗೆ ನೀಡಿದ್ದರು. ಆದರೆ, 2023ರಲ್ಲಿ ಒಪ್ಪಂದದ ಅವಧಿ ಮುಗಿದ ನಂತರ ದೀಲಿಪ್ ಅವರು ತಮ್ಮ ಪಾಲಿನ ಹಣ ಮತ್ತು ಶೇರ್ ಮೌಲ್ಯದ ವರದಿಯನ್ನು ಕೇಳಿದಾಗ ಆರೋಪಿಗಳು ಸತಾಯಿಸಲು ಆರಂಭಿಸಿದ್ದಾರೆ. ಇತ್ತೀಚೆಗೆ 2024ರ ಅಕ್ಟೋಬರ್‌ನಲ್ಲಿ ಆರೋಪಿಗಳು ದೀಲಿಪ್ ಅವರ ಪಾಲುದಾರ ಶ್ಯಾಮ್‌ದೀಪ್ ಅವರಿಗೆ ಕರೆ ಮಾಡಿಸಿ, ಕೇವಲ 6.9 ಕೋಟಿ ನಗದು ಮತ್ತು 20 ಲಕ್ಷ ಶೇರ್ ನೀಡಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ತಮಗೆ ಬರಬೇಕಾದ ಸುಮಾರು 33 ಕೋಟಿ ರೂಪಾಯಿ ಹಣವನ್ನು ನೀಡದೆ, ವ್ಯವಸ್ಥಿತವಾಗಿ ಸಂಚು ರೂಪಿಸಿ ಮೋಸ ಮಾಡಲಾಗಿದೆ ಎಂದು ದೀಲಿಪ್ ಅಡಿಗ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಪನಿಯ ಸಿಇಓ ಆನಂದರಾವ್, ಚೇರ್ಮನ್ ಪೀಟರ್ ಜಪ್ರೀ ಜರ್ಮೈನ್, ಸಿಟಿಓ ರಾಘವೇಂದ್ರ ಅಗರವಾಲ, ನಿರ್ದೇಶಕಿ ಸ್ಮಿತಾ ಶಾಹು ಮತ್ತು ಬೋರ್ಡ್ ಸದಸ್ಯ ಅಸುತೋಷ್ ಶ್ರೀವಾಸ್ತವ ಅವರ ವಿರುದ್ಧ ಮಣಿಪಾಲ ಪೊಲೀಸರು ಕಲಂ 409, 420 ಹಾಗೂ 34 ಐಪಿಸಿಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.