-->
ಯುವಜನತೆಗೆ ಬಸವಣ್ಣನ ವಿಚಾರಗಳನ್ನುತಿಳಿಸಲು ಪುತ್ಥಳಿ ಪ್ರತಿಷ್ಠಾಪನೆ: ಯಶ್ಪಾಲ್ ಸುವರ್ಣ

ಯುವಜನತೆಗೆ ಬಸವಣ್ಣನ ವಿಚಾರಗಳನ್ನುತಿಳಿಸಲು ಪುತ್ಥಳಿ ಪ್ರತಿಷ್ಠಾಪನೆ: ಯಶ್ಪಾಲ್ ಸುವರ್ಣ


ವಿಶ್ವವೇ ಮೆಚ್ಚಿ ಆರಾಧಿಸುವಂತಹ ಧೀಮಂತ ನಾಯಕ, ದಾರ್ಶನಿಕ, ಸಮಾಜ ಸುಧಾರಕ ಮತ್ತು ಲಿಂಗಾಯತ ಧರ್ಮದ ಸ್ಥಾಪಕ ಜಗಜ್ಯೋತಿ ಬಸವಣ್ಣನವರ ಆಚಾರ ಮತ್ತು ವಿಚಾರಗಳು ಸಾರ್ವಕಾಲಿಕವಾಗಿದೆ. ಸಾಮಾಜಿಕ ನ್ಯಾಯ ಮತ್ತು ಜಾತಿ ತಾರತಮ್ಯ ಮುಕ್ತ ಸಮ ಸಮಾಜದ ಸಂದೇಶಗಳನ್ನು ವಚನಗಳ ಮೂಲಕ ಸಾರಿದ ಬಸವಣ್ಣನವರ ತತ್ವಾದರ್ಶಗಳನ್ನು ಯುವಜನತೆಗೆ ತಿಳಿಸಲು ಬಸವಣ್ಣನವರ ಪುತ್ಥಳಿಯನ್ನು ಪ್ರತಿಷ್ಠಾಪಿಸಲು ಬದ್ದ ಎಂದು ಶಾಸಕ ಯಶ್ ಪಾಲ್ ಸುವರ್ಣ ಹೇಳಿದರು.  


ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ, ಉಡುಪಿ ಬಸವ ಸಮಿತಿ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಜಯಂತಿ  ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣನವರನ್ನು ಕೇವಲ ಕನ್ನಡಿಗರು ಮತ್ತು ಭಾರತೀಯರು ಮಾತ್ರ ಪೂಜಿಸುವುದಿಲ್ಲ ಅವರನ್ನು ವಿಶ್ವವೇ ಪೂಜಿಸುತ್ತದೆ. ಅವರೊಬ್ಬ ವಿಶ್ವಗುರು, ಇಂದು ಇಡೀ ವಿಶ್ವವೇ ಬಸವಣ್ಣನವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುತ್ತಿದೆ. ಮೇಲು-ಕೀಳು, ಜಾತಿ-ಮತ-ಲಿಂಗಗಳ ಆಧಾರದಲ್ಲಿ ಸಮಾಜವು ಒಡೆದಿದ್ದಾಗ ತಮ್ಮ ವಚನ ಸಾಹಿತ್ಯಗಳ ಮೂಲಕ ಲೋಕದ ಡೊಂಕನ್ನು ತಿದ್ದಿ ಸಮಾಜವನ್ನು ಒಗ್ಗೂಡಿಸಿದ ಮಹಾತ್ಮರು. 12ನೇ ಶತಮಾನದಲ್ಲೇ ತಮ್ಮ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೆ ತಂದು ಎಲ್ಲರೂ ಸಮಾನರು ಎಂದು ಸಾರಿದವರು. ಮನುಜರೆಲ್ಲರೂ ಸದಾ ಕರ್ತವ್ಯ ನಿರತರಾಗಿರಬೇಕು ಅದುವೇ ಭಗವಂತನನ್ನು ಸೇರುವ ಮಾರ್ಗ ಎಂದು ಜಗತ್ತಿಗೆ ಸಾರಿದ ಬಸವಣ್ಣನವರ ಕಾಯಕವೇ ಕೈಲಾಸ ತತ್ವವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು. 

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಬಸವಣ್ಣನವರು ಇವತ್ತಿಗೂ ಮಾನ್ಯರಾಗಿರಲು ಕಾರಣ ಅವರಲ್ಲಿದ್ದ ನಂಬಿಕೆ ಮತ್ತು ಗಟ್ಟಿತನ. ಸಮಾಜವನ್ನು ತಿದ್ದುವಲ್ಲಿ, ಸಮಾಜದ ನಿಮ್ನ ವರ್ಗದವರನ್ನು ಮುಖ್ಯವಾಹಿನಿಗೆ ತರುವಲ್ಲಿ ಅವರು ವಹಿಸಿದ ಪಾತ್ರ ಬಹುದೊಡ್ಡದು. ತಮ್ಮ ಈ ಪ್ರಯತ್ನದಲ್ಲಿ ಹಲವಾರು ಅಡೆತಡೆಗಳನ್ನು ಪರೀಕ್ಷೆಗಳನ್ನು ಅವರು ಎದುರಿಸಿದರು. ಆದರೆ ತಾವು ನಂಬಿದ ಕಾರ್ಯಗಳನ್ನು ಅಷ್ಟೇ ಗಟ್ಟಿತನದಿಂದ ಅನುಷ್ಠಾನ ಮಾಡಿದರು. ತಮ್ಮ ಹುಟ್ಟೂರಾದ ಬಸವನ ಬಾಗೇವಾಡಿಯನ್ನು ತ್ಯಜಿಸಿ ಕೂಡಲಸಂಗಮದಲ್ಲಿ ನೆಲೆನಿಂತು ಸಹಸ್ರಾರು ಜನರಿಗೆ ಲಿಂಗದೀಕ್ಷೆಯನ್ನು ನೀಡಿ ಜಾತಿ-ಮತ-ಲಿಂಗ ತಾರತಮ್ಯವನ್ನು ಹೋಗಲಾಡಿಸಿದರು. ಮನುಷ್ಯನ ನಡೆ ಮತ್ತು ನುಡಿ ಹೇಗಿರಬೇಕೆಂಬುದಕ್ಕೆ ಜ್ವಲಂತ ಉದಾಹರಣೆಯಾಗಿ ನಮಗೆಲ್ಲರಿಗೂ ಮಾದರಿಯಾದರು ಎಂದರು. 

ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಮಾತನಾಡಿ, ಬಸವ ಜಯಂತಿ ಆಚರಣೆ ಒಂದು ಅರ್ಥಪೂರ್ಣ ಮತ್ತು ಪಾವಿತ್ರ್ಯತೆ ಹೊಂದಿರುವ ಕಾರ್ಯಕ್ರಮ. ಬಸವಣ್ಣನವರು ಒಂದು ವರ್ಗ ಅಥವಾ ಸಮುದಾಯಕ್ಕೆ ಸೀಮಿತರಾದವರಲ್ಲ, ಅವರು ಮನುಕುಲಕ್ಕೇ ಸಂಬಂಧಿಸಿದವರು. ಮಾನವೀಯ ಮೌಲ್ಯಗಳನ್ನು ತಮ್ಮ ವಚನಗಳ ಮೂಲಕ ಸಾರಿ ಶಿವ ಶರಣರಿಗೆಲ್ಲಾ ಪ್ರೇರಣೆಯಾದವರು. ಅಲ್ಲಮಪ್ರಭು, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಮಾದಾರ ಚೆನ್ನಯ್ಯ, ಮಡಿವಾಳ ಮಾಚಯ್ಯನಂತಹ ಶಿವಶರಣರು ಬಸವಣ್ಣನವರ ಮುಂದಾಳುತ್ವದಲ್ಲಿ ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿ ಸುಧಾರಣೆಯ ಕ್ರಾಂತಿ ತಂದವರು. ಸಮ ಸಮಾಜ ನಿರ್ಮಾಣದ ಕನಸು ಕಂಡ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ನಿರ್ಮಾಣದ ಹಿಂದೆಯೂ ಬಸವಣ್ಣನವರ ತತ್ವಾದರ್ಶಗಳ ಗಾಢ ಪರಿಣಾಮ ಕಂಡು ಬರುತ್ತದೆ. ನಾವೆಲ್ಲರೂ ದ್ವೇಷ-ಅಸೂಯೆ-ವಂಚನೆ ರಹಿತ ಸಮಾಜ ನಿರ್ಮಿಸಿ ಉತ್ತಮ ನಾಗರಿಕರಾಗಬೇಕು ಎಂದರು. 

ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ  ಡಾ.ನಿರಂಜನ ಯು.ಸಿ ಉಪನ್ಯಾಸ ನೀಡಿ ಮಾತನಾಡಿ, ಬಸವಣ್ಣನವರು 12 ನೇ ಶತಮಾನದಲ್ಲಿ ನಡೆದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಚಳುವಳಿಯ ನೇತಾರ. ಅನುಭವ ಮಂಟಪದಲ್ಲಿ ಶಿವಶರಣರೆನ್ನೆಲ್ಲಾ ಒಟ್ಟುಗೂಡಿಸಿ ತಮ್ಮ ಜೀವನದ ಅನುಭೂತಿಗಳನ್ನು ಪರಾಮರ್ಶಿಸಿ ವಚನಗಳ ಮೂಲಕ ಸಮಾಜಕ್ಕೆ ತಿಳಿಸಿದರು. ಶಿವ ಶರಣರು ಅಂದಿನ ಕಾಲದಲ್ಲೇ ವಚನ ಸಾಹಿತ್ಯದ ಮೂಲಕ ಸಮಾನತೆಯ ಸಾರವನ್ನು ಬೋಧಿಸಿ ಸಮಾಜದ ವೈರುಧ್ಯಗಳನ್ನು ತಿದ್ದಿದರು. ಸಮಾಜದ ವಿರೋಧವನ್ನೂ ಲೆಕ್ಕಿಸದೆ ಅಂತರ್ಜಾತೀಯ ವಿವಾಹವನ್ನು ಪ್ರೋತ್ಸಾಹಿಸಿ ಜಾತಿಯ ಬೇಲಿಗಳನ್ನು ಕಿತ್ತೊಗೆದರು. ತಮ್ಮ ಕುಲಕಸುಬು, ಕುಲದೇವತೆಗಳ ಹೆಸರನ್ನು ತಮ್ಮ ಹೆಸರಿನ ಮುಂದೆ ಹಾಕಿಕೊಳ್ಳುವ ಮೂಲಕ ಯಾವುದೇ ಕೆಲಸ ಕೀಳಲ್ಲ, ಮಾಡುವ ಕೆಲಸದಲ್ಲಿ ಶೃದ್ದೆ ಇದ್ದರೆ ಅದು ಕೈಲಾಸವನ್ನು ಸೇರುವ ದಾರಿಯಾಗುತ್ತದೆ ಎಂದು ಸಾರಿದರು. ವಿಶ್ವದಲ್ಲೇ ಅತಿ ವಿಶಿಷ್ಟವಾದ ಸಾಹಿತ್ಯವಿದ್ದರೆ ಅದು ವಚನ ಸಾಹಿತ್ಯ. ಅಂದಿನ ಜನವಾಣಿ ಇಂದು ದೇವವಾಣಿಯಾಗಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದು ಮನುಕುಲಕ್ಕೆ ದಾರಿದೀಪವಾಗಿದೆ ಎಂದರು. 

ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್,ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ದಿನಕರ ಶೆಟ್ಟಿ ಅಂಪಾರು, ಉಡುಪಿ ಬಸವ ಸಮಿತಿ ಗೌರವಾಧ್ಯಕ್ಷ ಡಾ.ಜಿ.ಎಸ್ ಚಂದ್ರಶೇಖರ್, ಅಧ್ಯಕ್ಷ ಗಂಗಾಧರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಆದರ್ಶ ಆಸ್ಪತ್ರೆಯ ಅನುಶ್ರೀ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article