-->
’ನಾರಿಶಕ್ತಿ ವಂದನಾ’ ಅಧಿಕಾರಕ್ಕಾಗಿ ನಾರಿಯರನ್ನು ಬಳಸಿಕೊಳ್ಳುವ ಷಡ್ಯಂತ್ರ: ಜ್ಯೋತಿ ಕೃಷ್ಣ ಹೆಬ್ಬಾರ್

’ನಾರಿಶಕ್ತಿ ವಂದನಾ’ ಅಧಿಕಾರಕ್ಕಾಗಿ ನಾರಿಯರನ್ನು ಬಳಸಿಕೊಳ್ಳುವ ಷಡ್ಯಂತ್ರ: ಜ್ಯೋತಿ ಕೃಷ್ಣ ಹೆಬ್ಬಾರ್


"ನಾರೀ ಶಕ್ತಿ ವಂದನಾ" ಎಂದು ಕರೆಯುವುದನ್ನು ನಿಲ್ಲಿಸಿ ಇದು ಪುರುಷ ಪ್ರಧಾನ ಮನಸ್ಥಿತಿಯ ಭಾಷೆ ಮಹಿಳೆಯರನ್ನು ಪೂಜಿಸುವುದು ಬೇಡ ಅವರಿಗೆ ಸಿಗಬೇಕಾದ ಸಾಂವಿಧಾನಿಕ ಅಧಿಕಾರವನ್ನು ನಿರಾಕರಿಸಬೇಡಿ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಉಡುಪಿ ಜಿಲ್ಲಾ  ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಜ್ಯೋತಿ ಕೃಷ್ಣ ಹೆಬ್ಬಾರ್ ಕಿಡಿಕಾರಿದ್ದಾರೆ. 

ಪ್ರಾತಿನಿಧ್ಯ ಎಂಬುದು ನೀವು ನೀಡುವ ಭಿಕ್ಷೆ ಅಥವಾ ಕೊಡುಗೆ ಅಲ್ಲ ಅವು ನಮ್ಮ ಹಕ್ಕು. 2008ರಲ್ಲಿ ಮತ್ತು 2010ರಲ್ಲಿ ಎರಡು ಬಾರಿಯೂ ಯು.ಪಿ.ಎ ಸರ್ಕಾರವು ಮಹಿಳಾ ಮೀಸಲಾತಿ ಮಸೂದೆ ಮಂಡನೆ ಮಾಡಿತ್ತು. ಆದರೆ ಆ ಮಸೂದೆಯ ಸೋಲಿಗೆ ಕಾರಣರಾದವರು ಬಿಜೆಪಿಗರು.  2023ರಲ್ಲಿ ಕಾಂಗ್ರೆಸ್‌ ಸಂಪೂರ್ಣ ಬೆಂಬಲದಿಂದ ಮಹಿಳಾ 33% ಮೀಸಲಾತಿ ಮಸೂದೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪಾಸಾಗಿದೆ. ಕ್ಷೇತ್ರ ಪುನರ್ ವಿಂಗಡನೆಯು ವಿಸ್ತ್ರತ ಚರ್ಚೆಯ ವಿಷಯ ಇದನ್ನು ಮಹಿಳಾ ಮೀಸಲಾತಿಯೊಂದಿಗೆ ಸೇರಿಸಿದ್ದು ಸರಿಯಲ್ಲ. ಈಗಿರುವ 543 ಸದಸ್ಯರ ಲೋಕಸಭೆಯಲ್ಲಿ 33% ಮೀಸಲಾತಿಯ ಪ್ರಕಾರ 181 ಸ್ಥಾನಗಳನ್ನು ಮೊದಲು ನೀಡಿ ಎಂದು ಒತ್ತಾಯಿಸಿದರು. 
ಇನ್ನು 350 ಸ್ಥಾನ ಹೆಚ್ಚು ಮಾಡಿ 280 ಸ್ಥಾನ ನೀಡಿದ್ದಕ್ಕೆ ಏನು ಮಹಾ ಸಾಧನೆ ಮಾಡಿದ ಹಾಗೆ ಆಗುತ್ತದೆ. ಈಗಾಗಲೇ 2023ರಲ್ಲಿ ಮಹಿಳಾ ಮೀಸಲಾತಿ ಮಸೂದೆ ಪಾಸಾಗಿದ್ದು ಅದರ ಅನುಷ್ಠಾನ ಮಾಡಲು ಸಬೂಬು ಹುಡುಕುತ್ತಿರುವ ಬಿ.ಜೆ.ಪಿ ಸರ್ಕಾರ ತಾನು ಮಹಿಳಾ ವಿರೋಧಿ ಎಂಬುದನ್ನು ಕ್ಷೇತ್ರ ಪುನರ್ವಿಂಗಡನೆ ಬಿಲ್ಲನ್ನು ಮಂಡಿಸುವುದರ ಮೂಲಕ ಮತ್ತೊಮ್ಮೆ ಸಾಬೀತು ಮಾಡಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಸಂದರ್ಭಗಳಲ್ಲಿ ಜನರ ದಿಕ್ಕು ತಪ್ಪಿಸುವ, ಮಹಿಳೆಯರನ್ನು ಭಾವನಾತ್ಮಕವಾಗಿ ಕೆರಳಿಸಿ ಕಾಂಗ್ರೆಸ್ ವಿರುದ್ಧ ಮಹಿಳೆಯರನ್ನು ಎತ್ತಿ ಕಟ್ಟುವ ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ಬಿ.ಜೆ.ಪಿ. ಮತ್ತು ಮೋದಿ ಟೀಂಗೆ ಸೋಲಾಗಿದೆ.
2011ರ ಜನಗಣತಿ ಆಧಾರದಲ್ಲಿ ಕ್ಷೇತ್ರ ಪುನರ್ವಿಂಗಡನೆ ಮಾಡಿ ಉತ್ತರದ ಕೆಲವೇ ರಾಜ್ಯಗಳಿಂದ ಕೇಂದ್ರ ಸರ್ಕಾರವನ್ನು ರಚಿಸಿ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಮಾಡಹೊರಟ ಕೇಂದ್ರ ಬಿ.ಜೆ.ಪಿ.ಗೆ ತೀವ್ರ ಮುಖಭಂಗವಾಗಿದೆ. ಈ ಮಸೂದೆಗೆ ಪೂರಕವಾಗುವಷ್ಟು ಮತದ ಕೊರತೆ ಇದೆ ಎಂಬ ಅರಿವು ಬಿ.ಜೆ.ಪಿಗೆ ಮೊದಲೇ ಇತ್ತು. 543 ಸದಸ್ಯರು ಹಾಜರಿದ್ದರೂ 2/3 ಬಹುಮತ ಅಂದರೆ 362 ಸಂಸದರ ಅನುಮೋದನೆ ಬೇಕಿತ್ತು. ಬಿ.ಜೆ.ಪಿ ಮತ್ತು ಅದರ ಮಿತ್ರ ಪಕ್ಷಗಳು 293 ಸದಸ್ಯರ ಬಲ ಹೊಂದಿದೆ. ಹಾಗಾಗಿ ಮಹಿಳಾ ಮೀಸಲಾತಿಯ ಸೋಗಿನಲ್ಲಿ ಕ್ಷೇತ್ರ ಪುನರ್ವಿಂಗಡನೆ ಮಾಡಿ ಮುಂದಿನ ಚುನಾವಣೆಯಲ್ಲಿ ಕೆಲವೇ ರಾಜ್ಯಗಳಿಗೆ ಪ್ರಾತಿನಿಧ್ಯ ನೀಡಿ ತನ್ನ ಸರ್ಕಾರವನ್ನು ಭದ್ರ ಮಾಡಿಕೊಳ್ಳಲು ಹೊರಟ ಬಿ.ಜೆ.ಪಿ. ಗೆ ಸೋಲಾಗಿದೆ. ಸಂವಿಧಾನಕ್ಕೆ ಜಯವಾಗಿದೆ ಎಂದರು. 
ಕೇಂದ್ರ ಎನ್.ಡಿ.ಎ ಸರ್ಕಾರ ಈ ಕೂಡಲೇ ಸರ್ವ ಪಕ್ಷದ ಸಭೆ ಕರೆಯಲಿ. 2023ರಲ್ಲಿ ಪಾಸಾದ 33% ಮುಂದಿನ ಚುನಾವಣೆಗೆ ಮಹಿಳಾ ಮೀಸಲಾತಿಯನ್ನು ಯಾವುದಕ್ಕು ತಳುಕು ಹಾಕದೆ ಜಾರಿಯಾಗಲೇಬೇಕು. ಈಗಿರುವ 543 ಸ್ಥಾನಗಳಲ್ಲಿ 181 ಸ್ಥಾನಗಳನ್ನು ಮಹಿಳೆಯರಿಗೆ ಪುರುಷರು ಬಿಟ್ಟು ಕೊಟ್ಟಾಗ ಮಾತ್ರ ನಾರೀ ಶಕ್ತಿ. ಇಲ್ಲವಾದರೆ ಅಧಿಕಾರಕ್ಕಾಗಿ ನಾರಿಯರನ್ನು ಬಳಸಿಕೊಳ್ಳುವ ಬಿ.ಜೆ.ಪಿಯವರದ್ದು ದುಷ್ಟ ಶಕ್ತಿ ಎಂದರು. 
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮಹಿಳಾ ಮುಖಂಡರಾದ ವೆರೋನಿಕಾ ಕರ್ನೆಲಿಯೋ, ಭಾನು ಭಾಸ್ಕರ್, ಅನಿತಾ ಡಿಸೋಜ, ಮೀನಾಕ್ಷಿ ಮಾಧವ ಬನ್ನಂಜೆ, ಶೋಭಾ ನಾಯಕ್, ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಗೀತಾ ವಾಗ್ಲೆ  ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article