ಅಜ್ಜರಕಾಡು ಜಿಲ್ಲಾಸ್ಪತ್ರೆ ಅವ್ಯವಸ್ಥೆ: ಸೂಕ್ತ ಚಿಕಿತ್ಸೆಗೆ ಸಿಗದೇ ಬಡ ರೋಗಿಗಳ ಪರದಾಟ
ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮೂಲಭೂತ ಸಮಸ್ಯೆಗಳ ಪರಿಣಾಮ ಬಡ ರೋಗಿಗಳು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂಬ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.
ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಬಡ ರೋಗಿಗಳಿಗೆ ಅಗತ್ಯವಿರುವ ಎಲ್ಲಾ ಔಷಧಿಗಳು ಹಾಗೂ ಚುಚ್ಚುಮದ್ದುಗಳು ಲಭ್ಯವಾಗುತ್ತಿಲ್ಲ ಎನ್ನುವುದು ಪ್ರಮುಖ ಆರೋಪವಾಗಿದೆ. ವೈದ್ಯರು ಸೂಚಿಸುವ ಕೆಲವು ದುಬಾರಿ ಔಷಧಿಗಳನ್ನು ಖಾಸಗಿ ಮೆಡಿಕಲ್ ಅಂಗಡಿಗಳಿಂದ ಖರೀದಿಸಬೇಕಾದ ಅನಿವಾರ್ಯತೆ ಬಡ ರೋಗಿಗಳಿಗೆ ಎದುರಾಗುತ್ತಿದೆ. ಸರ್ಕಾರದ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಸಿಗಬೇಕಾದರೆ ಅಗತ್ಯ ಔಷಧಿಗಳು ಆಸ್ಪತ್ರೆಯ ಔಷಧಿ ಕೇಂದ್ರದಲ್ಲೇ ಲಭ್ಯವಾಗುವಂತೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಹಾಗೂ ಸಹಸಂಚಾಲಕ ತಾರಾನಾಥ್ ಮೇಸ್ತ ಶಿರೂರು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಜಿಲ್ಲಾಸ್ಪತ್ರೆಯ ಆವರಣದಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಕ್ಯಾಂಟಿನ್ ಹಲವು ತಿಂಗಳುಗಳಿಂದ ಮುಚ್ಚಲ್ಪಟ್ಟಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ರೋಗಿಗಳಿಗೆ ಆಸ್ಪತ್ರೆಯಿಂದ ಉಚಿತ ಆಹಾರ ದೊರೆಯುತ್ತಿದ್ದರೂ, ಅವರ ಸಂಬಂಧಿಕರು ಊಟ ಮತ್ತು ತಿಂಡಿಗಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕ್ಯಾಂಟಿನ್ ವ್ಯವಸ್ಥೆ ಇಲ್ಲದ ಕಾರಣ ಅನೇಕರು ಹಸಿದ ಹೊಟ್ಟೆಯಲ್ಲಿ ಆಸ್ಪತ್ರೆಯಲ್ಲೇ ಸಮಯ ಕಳೆಯಬೇಕಾಗಿದೆ ಎಂದು ದೂರಲಾಗಿದೆ.
ನಗರದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾಗುವ ಅಪರಿಚಿತ ರೋಗಿಗಳನ್ನು 112 ತುರ್ತು ಸಹಾಯವಾಣಿ, 108 ಆಂಬುಲೆನ್ಸ್ ಸಿಬ್ಬಂದಿ ಹಾಗೂ ಸಮಾಜಸೇವಕರು ಜಿಲ್ಲಾಸ್ಪತ್ರೆಗೆ ದಾಖಲಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಆದರೆ ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ಇಂತಹ ನಿರ್ಗತಿಕರು ಆಸ್ಪತ್ರೆಯಲ್ಲಿಯೇ ಉಳಿಯುವ ಘಟನೆಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ನಿರ್ಗತಿಕರನ್ನು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸುವ ವ್ಯವಸ್ಥೆ ರೂಪಿಸಬೇಕೆಂದು ನಾಗರೀಕ ಸಮಿತಿ ಮನವಿ ಮಾಡಿದೆ.
ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜೀ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಾರ್ವಜನಿಕರ ಬಳಕೆಗೆ ಇರುವ ಲಿಫ್ಟ್ ಯಂತ್ರ ದೀರ್ಘಕಾಲದಿಂದ ದುರಸ್ತಿಯಾಗದೆ ಇರುವುದೂ ಮತ್ತೊಂದು ಗಂಭೀರ ಸಮಸ್ಯೆಯಾಗಿದೆ. ಬಹುಮಹಡಿ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರು, ಗರ್ಭಿಣಿಯರು ಹಾಗೂ ವಿಶೇಷಚೇತನರು ಮೆಟ್ಟಿಲೇರುವ ಮೂಲಕ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯ ವಠಾರದಲ್ಲಿ ಅಗತ್ಯ ವಸ್ತುಗಳ ಅಂಗಡಿ ಆರಂಭಿಸಲು ಅವಕಾಶ ನೀಡಬೇಕು ಎಂಬ ಬೇಡಿಕೆಯೂ ಕೇಳಿಬಂದಿದೆ. ಪೌಷ್ಟಿಕ ಪಾನೀಯಗಳು, ಸಾಬೂನು, ಎಣ್ಣೆ, ಟೂತ್‌ಪೇಸ್ಟ್ ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳು ರೋಗಿಗಳು ಹಾಗೂ ಸಂಬಂಧಿಕರಿಗೆ ತುರ್ತು ಅವಶ್ಯಕತೆಯಾಗಿರುತ್ತದೆ. ಇವುಗಳಿಗಾಗಿ ಹೊರಗೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಲಾಗಿದೆ.
ಅದೇ ರೀತಿ, ಮರಣೋತ್ತರ ಪರೀಕ್ಷಾ ಕೇಂದ್ರದಲ್ಲಿ ಶವಗಳಿಗೆ ಅಗತ್ಯವಿರುವ ಪ್ಲಾಸ್ಟಿಕ್ ಹೊದಿಕೆ, ದೇಹದ ಭಾಗಗಳನ್ನು ಸಂಗ್ರಹಿಸಲು ಬೇಕಾದ ಡಬ್ಬಿಗಳು ಹಾಗೂ ಸುಗಂಧ ದ್ರವ್ಯಗಳಂತಹ ಸಾಮಗ್ರಿಗಳನ್ನು ಖರೀದಿಸಲು ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ವ್ಯವಸ್ಥೆಗಳನ್ನು ಆಸ್ಪತ್ರೆಯಲ್ಲೇ ಒದಗಿಸುವಂತೆ ಆಗ್ರಹಿಸಲಾಗಿದೆ.
ಇದೇ ವೇಳೆ, ಜಿಲ್ಲಾಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ನಾಗರೀಕ ಸಮಿತಿ ವಿನಂತಿಸಿದೆ.
