ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಕಾಮಗಾರಿ ಸ್ಥಗಿತ: ಬೃಹತ್ ಗುಂಡಿಯಿಂದ ಅಪಾಯದ ಭೀತಿ
Saturday, May 23, 2026
ಉಡುಪಿ ನಗರದ ಹೃದಯ ಭಾಗದಲ್ಲೇ ಕಳೆದ ಹಲವು ವರ್ಷಗಳಿಂದ ಬೃಹತ್ ಗಾತ್ರದ ತೆರೆದ ಗುಂಡಿಯೊಂದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ತೋಡಲಾಗಿದ್ದ ಈ ಆಳವಾದ ಹೊಂಡ ಇದೀಗ ಮಳೆ ನೀರಿನಿಂದ ತುಂಬಿ ದೊಡ್ಡ ಕೆರೆಯಂತೆ ಕಾಣಿಸುತ್ತಿದ್ದು, ಸುತ್ತಮುತ್ತಲಿನ ನಿವಾಸಿಗಳು ಭಯದ ವಾತಾವರಣದಲ್ಲಿ ದಿನ ಕಳೆಯುವಂತಾಗಿದೆ.
ಒಮ್ಮೆ ನಗರದ ಆರೋಗ್ಯ ಸೇವೆಗೆ ದೊಡ್ಡ ಆಶಾಕಿರಣವಾಗಿದ್ದ ಯೋಜನೆ ಈಗ ಅಪಾಯದ ಸಂಕೇತವಾಗಿ ಪರಿಣಮಿಸಿದೆ. ಸರ್ಕಾರದ ಭೂಮಿಯನ್ನು ಉದ್ಯಮಿ ಬಿ ಆರ್ ಶೆಟ್ಟಿ ಅವರಿಗೆ ಉಚಿತ ಹೆರಿಗೆ ಆಸ್ಪತ್ರೆ ನಿರ್ವಹಣೆಯ ಷರತ್ತಿನಡಿ ಮಂಜೂರು ಮಾಡಲಾಗಿತ್ತು. ಬಳಿಕ ಅದೇ ಜಾಗದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾಮಗಾರಿ ಆರಂಭಗೊಂಡಿತು. ಆದರೆ ಉದ್ಯಮಿಯ ಆರ್ಥಿಕ ನಷ್ಟದ ಹಿನ್ನೆಲೆ ಯೋಜನೆ ಅರ್ಧದಲ್ಲೇ ನಿಂತುಹೋಯಿತು. ಈಗ ಕಾಮಗಾರಿ ಸ್ಥಳದಲ್ಲಿ ಹಾಕಿದ ಪಿಲ್ಲರ್‌ಗಳು ಮಾತ್ರ ಉಳಿದಿದ್ದು, ಬೃಹತ್ ಗುಂಡಿ ಸಾರ್ವಜನಿಕರ ಜೀವಕ್ಕೆ ಕಂಟಕವಾಗಿದೆ.
ಮಳೆಗಾಲ ಆರಂಭವಾದ ಕೂಡಲೇ ಈ ಗುಂಡಿ ಸಂಪೂರ್ಣ ನೀರಿನಿಂದ ತುಂಬಿ ಈಜುಕೊಳದಂತಾಗುತ್ತದೆ. ಸುತ್ತಮುತ್ತ ಮೂರು ಕಡೆಗಳಲ್ಲಿ ಇರುವ ಬಹುಮಹಡಿ ಕಟ್ಟಡಗಳ ಅಡಿಪಾಯಕ್ಕೂ ಇದೀಗ ಭೀತಿ ಎದುರಾಗಿದೆ. ಈಗಾಗಲೇ ಗುಂಡಿಯ ಅಂಚಿನ ಮಣ್ಣು ಕುಸಿಯತೊಡಗಿದ್ದು, ಸ್ಥಳೀಯ ನಿವಾಸಿಗಳು ಮತ್ತಷ್ಟು ಆತಂಕಗೊಂಡಿದ್ದಾರೆ.
ನಗರದ ಪ್ರಮುಖ ರಸ್ತೆಯ ಮಗ್ಗುಲಲ್ಲೇ, ಶ್ರೀ ಕೃಷ್ಣ ಮಠಕ್ಕೆ ಸಾಗುವ ಮಾರ್ಗ ಮಧ್ಯದಲ್ಲಿರುವ ಈ ತೆರೆದ ಗುಂಡಿ ಯಾವುದೇ ಕ್ಷಣದಲ್ಲಿ ದುರಂತಕ್ಕೆ ಕಾರಣವಾಗಬಹುದು ಎಂಬ ಭೀತಿ ವ್ಯಕ್ತವಾಗಿದೆ. ದಾರಿ ತಪ್ಪಿ ಬಂದ ಮಕ್ಕಳು ಅಥವಾ ಸಾರ್ವಜನಿಕರು ನೀರು ತುಂಬಿದ ಗುಂಡಿಗೆ ಬಿದ್ದರೆ ಪ್ರಾಣಾಪಾಯ ಖಚಿತ ಎಂದು ನಾಗರಿಕರು ಎಚ್ಚರಿಸುತ್ತಿದ್ದಾರೆ.
ಇದರ ಜೊತೆಗೆ ಮಳೆ ನೀರು ನಿಂತು ಕೊಳಚೆ ರೂಪುಗೊಳ್ಳುತ್ತಿರುವುದರಿಂದ ಡೆಂಗ್ಯೂ ಹಾಗೂ ಮಲೇರಿಯಾ ಹರಡುವ ಆತಂಕವೂ ಹೆಚ್ಚಾಗಿದೆ. ನಗರಸಭೆ ಕಚೇರಿಯ ಮುಂಭಾಗದಲ್ಲೇ ಈ ಪರಿಸ್ಥಿತಿ ನಿರ್ಮಾಣವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಎರಡು ಮೂರು ವರ್ಷಗಳಿಂದ ಗುಂಡಿಯನ್ನು ಮುಚ್ಚುವಂತೆ ಸ್ಥಳೀಯ ನಿವಾಸಿಗಳು, ಕಟ್ಟಡ ಮಾಲೀಕರು ಮತ್ತು ವ್ಯಾಪಾರಸ್ಥರು ನಿರಂತರವಾಗಿ ಒತ್ತಾಯಿಸುತ್ತಿದ್ದರೂ ಇನ್ನೂ ಯಾವುದೇ ಶಾಶ್ವತ ಪರಿಹಾರ ದೊರಕಿಲ್ಲ. “ಅಪಾಯದಿಂದ ನಮ್ಮನ್ನು ಕಾಪಾಡಿ” ಎಂಬುದು ಇದೀಗ ನಾಗರಿಕರ ಒಕ್ಕೊರಲಿನ ಆಗ್ರಹವಾಗಿದೆ.
ಮಳೆಗಾಲ ಮತ್ತೊಮ್ಮೆ ಆರಂಭವಾಗಿರುವ ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು, ಬೃಹತ್ ಗುಂಡಿಯನ್ನು ಸುರಕ್ಷಿತವಾಗಿ ಮುಚ್ಚುವ ಕಾರ್ಯಕ್ಕೆ ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇಲ್ಲವಾದರೆ ನಗರದ ಮಧ್ಯಭಾಗದಲ್ಲಿರುವ ಈ ‘ಅಪಾಯದ ಹೊಂಡ’ ಯಾವಾಗ ದುರಂತಕ್ಕೆ ಕಾರಣವಾಗುತ್ತದೆ ಎಂಬ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ..
