"ಮಳೆ ಬಂದರೆ ಸಾಕು ರಜೆ ಬೇಕು!": ಶಾಲಾ ಮಕ್ಕಳ ನಿರೀಕ್ಷೆ ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್
Monday, June 08, 2026
ಮಳೆಗಾಲ ಆರಂಭವಾದರೆ ಸಾಕು, ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮೊದಲು ಮೂಡುವ ಪ್ರಶ್ನೆ "ನಾಳೆ ಶಾಲೆಗೆ ರಜೆ ಉಂಟಾ (ಇದೆಯಾ)..?" ಕರಾವಳಿ ಜಿಲ್ಲೆಗಳಾದ ಉಡುಪಿಯಲ್ಲಿ ಭಾರೀ ಮಳೆಯ ಮುನ್ಸೂಚನೆಯ ಹಿನ್ನೆಲೆ ರೆಡ್ ಅಲರ್ಟ್ ಘೋಷಣೆಯಾಗಿರುವ ಸಂದರ್ಭದಲ್ಲಿ, ಶಾಲಾ ಮಕ್ಕಳು ಮತ್ತು ಪೋಷಕರ ಗಮನ ಈಗ ಜಿಲ್ಲಾಡಳಿತದ ಮುಂದಿನ ನಿರ್ಧಾರದತ್ತ ನೆಟ್ಟಿದೆ.ಕಳೆದ ಕೆಲವು ವರ್ಷಗಳಿಂದ ಭಾರೀ ಮಳೆಯ ಸಂದರ್ಭಗಳಲ್ಲಿ ಶಾಲಾ-ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸುವುದು ಸಾಮಾನ್ಯವಾಗಿದೆ. ಇದೇ ಕಾರಣಕ್ಕೆ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ "ರಜೆ ನೀಡಿ" ಎಂಬ ಅಭಿಯಾನವೂ ಶುರುವಾಗುತ್ತದೆ. ಕೆಲವರು ವಿನೋದಭರಿತ ಪೋಸ್ಟ್‌ಗಳು, ಮೀಮ್ಸ್‌ಗಳನ್ನು ಹಂಚಿಕೊಂಡರೆ, ಇನ್ನೂ ಕೆಲವರು ಜಿಲ್ಲಾಧಿಕಾರಿಗಳಿಗೆ ಉದ್ದೇಶಿಸಿ ಕಲ್ಪಿತ ಪತ್ರಗಳನ್ನು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಾರೆ.
"ಮಾನ್ಯ ಜಿಲ್ಲಾಧಿಕಾರಿಗಳೇ, ಮಳೆ ತುಂಬಾ ಜೋರಾಗಿದೆ. ಶಾಲೆಗೆ ಹೋಗುವುದು ಕಷ್ಟ. ದಯವಿಟ್ಟು ನಾಳೆ ರಜೆ ನೀಡಿ" ಎಂಬ ಶೈಲಿಯ ಪೋಸ್ಟ್‌ಗಳು ಪ್ರತೀ ವರ್ಷವೂ ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಈ ಪೋಸ್ಟ್‌ಗಳು ಸಾವಿರಾರು ಲೈಕ್ಸ್, ಶೇರ್‌ಗಳನ್ನು ಪಡೆದು ಚರ್ಚೆಗೆ ಕಾರಣವಾಗುತ್ತವೆ. ವಿದ್ಯಾರ್ಥಿಗಳ ಈ ನಿರೀಕ್ಷೆ ಮತ್ತು ಉತ್ಸಾಹ ಮಳೆಗಾಲದ ವಿಶೇಷ ಆಕರ್ಷಣೆಯಾಗಿ ಮಾರ್ಪಟ್ಟಿದೆ.
ಇನ್ನೊಂದೆಡೆ, ಪೋಷಕರು ಹಾಗೂ ಸಾರ್ವಜನಿಕರು ವಿದ್ಯಾರ್ಥಿಗಳ ಸುರಕ್ಷತೆಯನ್ನು ಪ್ರಮುಖವಾಗಿ ಪರಿಗಣಿಸುತ್ತಿದ್ದು, ರಸ್ತೆಗಳ ಸ್ಥಿತಿ, ನದಿ-ಹಳ್ಳಗಳ ನೀರಿನ ಮಟ್ಟ ಹಾಗೂ ಹವಾಮಾನ ಇಲಾಖೆಯ ಎಚ್ಚರಿಕೆಗಳ ಆಧಾರದ ಮೇಲೆ ಜಿಲ್ಲಾಡಳಿತ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಮಳೆ ಸುರಿಯುವ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ "ರಜೆ ಘೋಷಣೆ ಯಾವಾಗ?" ಎಂಬ ಪ್ರಶ್ನೆಗಳು ಹೆಚ್ಚಾಗುತ್ತಿವೆ. ಕೆಲವು ವಿದ್ಯಾರ್ಥಿಗಳು ಮಧ್ಯರಾತ್ರಿ ವರೆಗೂ ರಜೆ ಘೋಷಣೆಗೆ ಕಾದು ಕುಳಿತಿರುತ್ತಾರೆ. ಕೆಲವು ಮಕ್ಕಳು ಸೀದಾ ಡಿಸಿಗೇ ಕರೆ ಮಾಡಿ "ನಾಳೆ ರಜೆ ಉಂಟಾ" ಎಂದು ಕೇಳಿ ಬಿಡುತ್ತಾರೆ. ಕೆಲವೊಮ್ಮೆ ಅಧಿಕೃತ ಪ್ರಕಟಣೆ ಬರುವ ಮುನ್ನವೇ ವದಂತಿಗಳು ಕೂಡಾ ಹರಡುತ್ತವೆ.
ಒಟ್ಟಾರೆ, ಉಡುಪಿ ದಕ್ಷಿಣ ಕನ್ನಡದಲ್ಲಿ ಮಳೆಗಾಲ ಎಂದರೆ ಒಂದು ಕಡೆ ಪ್ರಕೃತಿಯ ಅಬ್ಬರ, ಮತ್ತೊಂದೆಡೆ ಶಾಲಾ ಮಕ್ಕಳ ರಜೆ ಕನಸು. ಈ ಬಾರಿ ಮಳೆ ಎಷ್ಟರ ಮಟ್ಟಿಗೆ ಸುರಿಯಲಿದೆ ಮತ್ತು ಜಿಲ್ಲಾಧಿಕಾರಿಗಳ ನಿರ್ಧಾರ ಏನಾಗಲಿದೆ ಎಂಬ ಕುತೂಹಲ ವಿದ್ಯಾರ್ಥಿಗಳಲ್ಲಿ ಮನೆ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ "ಮಳೆ ಬಂದರೆ ರಜೆ ಬೇಕು" ಎಂಬ ಅಭಿಯಾನ ಮತ್ತೊಮ್ಮೆ ಜೋರಾಗಿದೆ.

