-->
 ರಸ್ತೆ ಅಪಘಾತ ಪ್ರಕರಣ: 23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ರಸ್ತೆ ಅಪಘಾತ ಪ್ರಕರಣ: 23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ


ರಸ್ತೆ ಅಪಘಾತ ಪ್ರಕರಣದಲ್ಲಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದರೂ ಕಳೆದ 23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಲಾರಿ ಚಾಲಕನನ್ನು ಪಡುಬಿದ್ರಿ ಪೊಲೀಸರು ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮಹಾರಾಷ್ಟ್ರದ ಪುಣಾ ಜಿಲ್ಲೆಯ ಉತ್ರಳ್ಳಿ ತಾಲೂಕಿನ ಬೋರ್ ಗ್ರಾಮದ ನಿವಾಸಿ ವಿಲಾಸ್ ಶಿಂಧೆ ಬಂಧಿತ ಆರೋಪಿ. 2002ರ ಸೆಪ್ಟೆಂಬರ್ 7ರಂದು ಬೆಳಿಗ್ಗೆ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬಡಾ ಗ್ರಾಮದ ಮೂಳೂರು ಮಸೀದಿ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕನಿಗೆ ಲಾರಿ ಡಿಕ್ಕಿಯಾಗಿ ಬಾಲಕ ಮೃತಪಟ್ಟಿದ್ದ.

ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿ ಆರೋಪಿ ಲಾರಿ ಚಾಲಕನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವಿಲಾಸ್ ಶಿಂಧೆಗೆ ಮೂರು ತಿಂಗಳ ಜೈಲು ಶಿಕ್ಷೆ ಹಾಗೂ 1,000 ರೂ. ದಂಡ ವಿಧಿಸಿತ್ತು.

ನ್ಯಾಯಾಲಯದ ತೀರ್ಪಿನ ಬಳಿಕ ಶಿಕ್ಷೆಯನ್ನು ಅನುಭವಿಸದೆ ಆರೋಪಿ ವಿಲಾಸ್ ಶಿಂಧೆ ಕಳೆದ 23 ವರ್ಷಗಳಿಂದ ತಲೆಮರೆಸಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಆತನ ವಿರುದ್ಧ ಎಲ್‌ಪಿಸಿ ವಾರಂಟ್ ಹೊರಡಿಸಿತ್ತು. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರಿರಾಮ್ ಶಂಕರ್ ಅವರ ಆದೇಶದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಧಾಕರ ಎಸ್. ನಾಯಕ್, ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಎಸ್. ವಿಜಯಪ್ರಸಾದ್ ಹಾಗೂ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಆಲಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು.


ಪಡುಬಿದ್ರಿ ಪೊಲೀಸ್ ಠಾಣೆಯ ಪಿಎಸ್‌ಐ ಸಕ್ತಿವೇಲು ಹಾಗೂ ಅನಿಲ್ ಕುಮಾರ್ ಟಿ. ನಾಯಕ್ ಅವರ ಸೂಚನೆಯಂತೆ ಸಿಬ್ಬಂದಿಗಳಾದ ಎಎಸ್‌ಐ ರಾಜೇಶ್ ಪಿ., ಹೆಚ್‌ಸಿ ಕೃಷ್ಣಪ್ರಸಾದ್ ಮತ್ತು ಪಿಸಿ ಸಂದೇಶ್ ಭಂಡಾರಿ ಅವರು ತನಿಖೆ ನಡೆಸಿ, ಆರೋಪಿ ವಿಲಾಸ್ ಶಿಂಧೆ ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿರುವುದನ್ನು ಪತ್ತೆಹಚ್ಚಿದ್ದಾರೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. 

Ads on article

Advertise in articles 1

advertising articles 2

Advertise under the article