6.37 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು: ಕಾರ್ಮಿಕನ ಬಂಧನ
ಮನೆಯ ಕಾಮಗಾರಿ ನಡೆಸಲು ಬಂದಿದ್ದ ಕಾರ್ಮಿಕನೊಬ್ಬ 6.37 ಲಕ್ಷ ರೂ. ಮೌಲ್ಯದ 49 ಗ್ರಾಂ ಚಿನ್ನಾಭರಣ ಹಾಗೂ ಗೋಲ್ಡ್ ಕೋಟೆಡ್ ವಾಚ್ ಕಳವು ಮಾಡಿದ್ದ ಪ್ರಕರಣವನ್ನು ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು 24 ಗಂಟೆಯೊಳಗೆ ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಉತ್ತರ ಪ್ರದೇಶದ ಬಲರಾಮ್‌ಪುರ ಮೂಲದ, ಪ್ರಸ್ತುತ ಮಂಗಳೂರಿನ ಬಂದರು ಅಜಿಜುದ್ದೀನ್ ರಸ್ತೆ ನಿವಾಸಿ ಜಹೀರುದ್ದೀನ್ (24) ಎಂದು ಗುರುತಿಸಲಾಗಿದೆ.
ಇತ್ತೀಚೆಗೆ ಮಂಗಳೂರಿನ ಮೇರಿಹಿಲ್ ಬಾಂದೋಟ್ಟು ಪ್ರದೇಶದ ಮನೆಯೊಂದರಲ್ಲಿ ಹಿಂಭಾಗದ ಕೊಠಡಿಯ ಛಾವಣಿ ಬದಲಾವಣೆ ಹಾಗೂ ಹಾಲ್‌ನಲ್ಲಿ ಫಾಲ್ಸ್ ಸೀಲಿಂಗ್ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಮನೆಯ ಟೇಬಲ್ ಡ್ರಾವರ್‌ನಲ್ಲಿದ್ದ ಸಣ್ಣ ಪರ್ಸ್‌ನಿಂದ 20 ಗ್ರಾಂ ತೂಕದ ಚಿನ್ನದ ಕಡಗ, 17 ಗ್ರಾಂ ತೂಕದ ಚಿನ್ನದ ಚೈನ್, 8 ಗ್ರಾಂ ತೂಕದ ಉಂಗುರ, 4 ಗ್ರಾಂ ತೂಕದ ಮತ್ತೊಂದು ಚಿನ್ನದ ಉಂಗುರ ಹಾಗೂ ಸೊನಾಟಾ ಕಂಪನಿಯ ಗೋಲ್ಡ್ ಕೋಟೆಡ್ ವಾಚ್ ಸೇರಿದಂತೆ ಒಟ್ಟು ಸುಮಾರು 6.37 ಲಕ್ಷ ರೂ. ಮೌಲ್ಯದ ವಸ್ತುಗಳು ಕಳವಾಗಿದ್ದವು.
ಈ ಸಂಬಂಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಮನೆ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರನ್ನು ವಿಚಾರಣೆ ನಡೆಸಿದ ವೇಳೆ ಜಹೀರುದ್ದೀನ್ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ ಕಳವು ಮಾಡಿದ್ದ ಚಿನ್ನಾಭರಣಗಳು ಹಾಗೂ ಗೋಲ್ಡ್ ಕೋಟೆಡ್ ವಾಚ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.