ದೆಹಲಿ ಪ್ರತಿಭಟನಾಕಾರರ ಮೇಲಿನ ದೌರ್ಜನ್ಯ ಪ್ರಜಾಪ್ರಭುತ್ವದ ಕಗ್ಗೊಲೆ: ಎಂ.ಎ ಗಫೂರ್
Wednesday, July 22, 2026
ದೆಹಲಿಯಲ್ಲಿ ಪ್ರತಿಭಟನಾಕಾರರ ಮೇಲೆ ನಡೆದ ದೌರ್ಜನ್ಯವು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಕರ್ನಾಟಕ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಆಕ್ರೋಶ ವ್ಯಕ್ತಪಡಿಸಿದರು.
ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಹಾಗೂ ದೆಹಲಿಯಲ್ಲಿ ಪ್ರತಿಭಟನಾಕಾರರ ಮೇಲೆ ನಡೆದ ಪೊಲೀಸರ ದೌರ್ಜನ್ಯವನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಬ್ರಹ್ಮಗಿರಿ ವೃತ್ತದಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೆಹಲಿಯಲ್ಲಿ ಪ್ರತಿಭಟನಾಕಾರರ ಮೇಲಿನ ದೌರ್ಜನ್ಯವು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು. ಜನಸಾಮಾನ್ಯರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನವನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಈ ಘಟನೆಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಕ್ಷಮೆಯಾಚಿಸಬೇಕು ಹಾಗೂ ನೈತಿಕ ಹೊಣೆ ಹೊತ್ತು ಪ್ರಧಾನಿ ಮತ್ತು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಎನ್‌ಎಸ್‌ಯುಐ ಜಿಲ್ಲಾ ಅಧ್ಯಕ್ಷ ಸೌರಭ್ ಬಲ್ಲಾಳ್ ಮಾತನಾಡಿ, ನೀಟ್ ಪರೀಕ್ಷೆಯ ಪೇಪರ್ ಲೀಕ್ ಧರ್ಮೇಂದ್ರ ಪ್ರಧಾನ್ ಅವರ ಕುಮ್ಮಕ್ಕಿನಿಂದ ನಡೆದಿದೆ. ಪ್ರಕರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಂ ವಾಂಗ್ಚುಕ್ ಅವರನ್ನು ಬಲವಂತವಾಗಿ ಗೂಂಡಾಗಳನ್ನು ಕಳುಹಿಸಿ ಪ್ರತಿಭಟನೆ ಮೊಟಕುಗೊಳಿಸುವಂತೆ ಮಾಡಲಾಗಿದೆ. ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕು ಎಂದರು.
ಪ್ರತಿಭಟನೆಯ ವೇಳೆ ಕಾರ್ಯಕರ್ತರು ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿದರು. ರಸ್ತೆ ತಡೆ ನಡೆಸಲು ಯತ್ನಿಸಿದ ಕೆಲ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.
ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಕಿಶನ್ ಹೆಗ್ಡೆ ಕೊಳ್ಳೇಬೈಲ್, ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೋ, ಪ್ರಖ್ಯಾತ್ ಶೆಟ್ಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.