-->
ಕರಾವಳಿ ಹೈಕೋರ್ಟ್ ಪೀಠಕ್ಕೆ ಆಗ್ರಹ: ಉಡುಪಿಯಲ್ಲಿ ಜಿಲ್ಲಾಮಟ್ಟದ ಹಕ್ಕೊತ್ತಾಯ ಸಭೆ

ಕರಾವಳಿ ಹೈಕೋರ್ಟ್ ಪೀಠಕ್ಕೆ ಆಗ್ರಹ: ಉಡುಪಿಯಲ್ಲಿ ಜಿಲ್ಲಾಮಟ್ಟದ ಹಕ್ಕೊತ್ತಾಯ ಸಭೆ


ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದರೆ ಕರಾವಳಿಗೆ ಸಾಕಷ್ಟು ಅನುಕೂಲವಾಗಲಿದೆ. ವಕೀಲರು ಮತ್ತು ಕ್ಷಕಿದಾರರಿಗೆ ಮಾತ್ರವಲ್ಲದೆ, ಜನಸಾಮಾನ್ಯರು, ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳಿಗೂ ಸಾಕಷ್ಟು ಪ್ರಯೋಜನ ಆಗಲಿದೆ ಎಂದು ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಹೇಳಿದರು.


ಯು-ಆ್ಯಕ್ಟ್ ಸಮಿತಿ ಹಾಗೂ ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ವತಿಯಿಂದ ಉಡುಪಿಯ ಎಂಜಿಎಂ ರವೀಂದ್ರ ಮಂಟಪದಲ್ಲಿ ಶನಿವಾರ ಕರಾವಳಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹಿಸಿ ನಡೆದ ಜಿಲ್ಲಾ ಮಟ್ಟದ ವಿವಿಧ ಸಂಘ-ಸಂಸ್ಥೆಗಳ ಹಕ್ಕೊತ್ತಾಯ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.


ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದರೆ ಕಕ್ಷಿದಾರರ ಪ್ರಯಾಣ ಹಾಗೂ ಕಾನೂನು ಹೋರಾಟದ ವೆಚ್ಚ ಕಡಿಮೆಯಾಗಲಿದೆ. ಜನಸಾಮಾನ್ಯರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರೆಯುವಂತಾಗುತ್ತದೆ. ನ್ಯಾಯಾಲಯದ ವ್ಯಾಪ್ತಿಯನ್ನು ಸಮರ್ಪಕವಾಗಿ ನಿರ್ಧರಿಸಿ ಜನರಿಗೆ ನ್ಯಾಯ ದೊರೆಯುವ ವ್ಯವಸ್ಥೆ ರೂಪಿಸಬೇಕು ಎಂದು ಅವರು ತಿಳಿಸಿದರು.

ಕರ್ನಾಟಕ ಬಾರ್ ಕೌನ್ಸಿಲ್‌ನ ಸದಸ್ಯೆ ಶ್ಯಾಮಲಾ ಭಂಡಾರಿ ಮಾತನಾಡಿ, ಕರಾವಳಿಗೆ ಹೈಕೋರ್ಟ್ ಪೀಠ ಸ್ಥಾಪನೆಗೆ ಕೆಲವೊಂದು ಲಾಬಿಗಳು ಅಡ್ಡಿ ಯಾಗುತ್ತಿದೆ. ಅದಕ್ಕೆ ಜನಪತಿನಿಧಿಗಳು, ವಕೀಲರು ಹಾಗೂ ಸಾರ್ವಜನಿಕರು ಒಗ್ಗಟ್ಟಾಗಿ ಹೋರಾಟ ಮಾಡಬೇಕು. ಸರಕಾರ, ಮುಖ್ಯ ನ್ಯಾಯಮೂರ್ತಿ ಹಾಗೂ ಜನಪ್ರತಿನಿಧಿಗಳಿಗೆ ಕರಾವಳಿಗೆ ಯಾಕೆ ಪೀಠ ಬೇಕು ಎಂಬುದರ ಬಗ್ಗೆ ಮನವರಿಕೆ ಮಾಡಿಸಬೇಕು ಎಂದರು.

ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಶೇಣವ ಮಾತನಾಡಿ, ಪಕ್ಷಭೇದ ಮರೆತು ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕು. ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಗಳ ಗಮನ ಸೆಳೆಯುವ ಪ್ರಯತ್ನ ಮಾಡಬೇಕಾಗಿದೆ. ಉಡುಪಿ ಮತ್ತು ದ.ಕ. ಜಿಲ್ಲೆಯ ಜನರಿಗೆ ಅನುಕೂಲ ವಾಗುವ ಮಧ್ಯಭಾಗದಲ್ಲಿ ಪೀಠವನ್ನು ಸ್ಥಾಪಿಸಬೇಕು ಎಂದರು.

ಮಂಗಳೂರು ವಿವಿ ಪ್ರಾದ್ಯಾಪಕಿ ಸವಿತಾ ಕೊರಗ ಮಾತನಾಡಿ, ಬುಡಕಟ್ಟು ಸಮುದಾಯವಾಗಿರುವ ಕೊರಗರು ಅನೇಕ ವರ್ಷಗಳಿಂದ ಸಾಮಾಜಿಕ ನ್ಯಾಯಗಳಿಂದ ವಂಚಿತರಾಗುತ್ತಿದ್ದಾರೆ. ನಮ್ಮಲ್ಲಿಯೇ ಹೈಕೋರ್ಟ್ ಪೀಠ ವಾದರೆ ನಮ್ಮ ಸಮುದಾಯಕ್ಕೆ ಸಾಂವಿಧಾನಿಕ ಹಕ್ಕುಗಳ ಸಮರ್ಪಕ ಲಾಭದೊರೆಯಲು ಸಾಧ್ಯವಾಗುತ್ತದೆ ಮತ್ತು ನ್ಯಾಯದ ವ್ಯವಸ್ಥೆ ಜನಸ್ನೇಹಿಯಾಗು ತ್ತದೆ ಎಂದು ಹೇಳಿದರು.

ಮನೋವೈದ್ಯ ಡಾ.ಪಿ.ವಿ.ಭಂಡಾರಿ ಮಾತನಾಡಿ, ಉಡುಪಿ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜಿನಂತೆ ಹೈಕೋರ್ಟ್ ಪೀಠದ ವಿಚಾರದಲ್ಲೂ ಅನ್ಯಾಯ ಆಗಿದೆ. ಈ ಅನ್ಯಾಯವನ್ನು ಸರಿಪಡಿಸಲು ಹೋರಾಟದ ಒಂದೇ ದಾರಿಯಾಗಿದೆ ಎಂದು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ, ಪ್ರೇಮ್ ಪ್ರಸಾದ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕೋರ್ಟ್‌ಗಳಲ್ಲಿ ಲಕ್ಷಾಂತರ ದಾವೆಗಳು ಇತ್ಯರ್ಥ ಆಗಿ, ಅದರಲ್ಲಿ ಸಾವಿರಾರು ಮಂದಿ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗದೆ ನ್ಯಾಯದಿಂದ ವಂಚಿತರಾಗುತ್ತಿದ್ದಾರೆ. ಆದುದರಿಂದ ಕರಾವಳಿಗೆ ಹೈಕೋರ್ಟ್‌ ಪೀಠ ಬಹಳಷ್ಟು ಅಗತ್ಯ ಇದೆ ಎಂದರು.

ಈ ಹೋರಾಟವನ್ನು ಇಡೀ ಜಿಲ್ಲೆಗೆ ವಿಸ್ತರಿಸುವ ಉದ್ದೇಶದಿಂದ ಮುಂದಿನ 15ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಸಭೆಯನ್ನು ನಡೆಸಲಾಗುವುದು. ಅದೇ ರೀತಿ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ರೂಪಿಸಬೇಕು ಮತ್ತು ವಿದ್ಯಾರ್ಥಿಗಳ ಬಳಿ ಈ ಹೋರಾಟವನ್ನು ತೆಗೆದುಕೊಂಡು ಹೋಗ ಬೇಕು ಎಂದು ಅವರು ಹೇಳಿದರು.

ಹಿರಿಯ ಪತ್ರಕರ್ತ ನಿತ್ಯಾನಂದ ಪಡ್ರೆ, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಶ್ರೀನಾಥ್ ರಾವ್, ಕಾರ್ಕಳ ವಕೀಲರ ಸಂಘದ ಉಪಾಧ್ಯಕ್ಷ ಹರೀಶ್ ಅಧಿಕಾರಿ, ಉಡುಪಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರ ಶೇಖ‌ರ್ ಶೆಟ್ಟಿ, ಹಿರಿಯ ವಕೀಲ ಮಟ್ಟಾರು ರತ್ನಾಕರ ಹೆಗ್ಡೆ, ಬೈಂದೂರು ವಕೀಲರ ಸಂಘದ ಅಧ್ಯಕ್ಷ ಪ್ರಶಾಂತ್‌ ಪೂಜಾರಿ ಮಾತನಾಡಿದರು.

ಸುರೇಶ್ ಕಾಮತ್ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು. ವಿಜಯ ಡಿಸೋಜ ವಂದಿಸಿದರು.

Ads on article

Advertise in articles 1

advertising articles 2

Advertise under the article