ಸೆ.9-15: ಉಡುಪಿ ಎಂಜಿಎಂ ಕಾಲೇಜಿನಲ್ಲಿ ಸಾಂಸ್ಕೃತಿಕ ಹಬ್ಬ
ಜೇಸಿಐ ಉಡುಪಿ ಸಿಟಿ, ವನಸುಮ ಟ್ರಸ್ಟ್ ಮತ್ತು ವನಸುಮ ವೇದಿಕೆ ಸಹಯೋಗದಲ್ಲಿ ಸೆಪ್ಟೆಂಬರ್ 9ರಿಂದ 15ರ ತನಕ ಒಂದು ವಾರದ ಸಾಂಸ್ಕೃತಿಕ ಹಬ್ಬ ಪ್ರತಿದಿನ ಸಂಜೆ 6 ಗಂಟೆಯಿಂದ ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ ಎಂದು ಜೇಸೀ ಅಧ್ಯಕ್ಷೆ ಪಲ್ಲವಿ ಕೊಡಗು ತಿಳಿಸಿದ್ದಾರೆ.
ಉಡುಪಿಯಲ್ಲಿ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಈ ಸಪ್ತಾಹವನ್ನು ಜೇಸಿಐ ಭಾರತದ ಜೇಸೀ ಸಪ್ತಾಹ ನಿರ್ದೇಶಕರಾದ ಗೌರೀಶ್ ಭಾರ್ಗವ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸೀಐ ಉಡುಪಿ ಸಿಟಿಯ ಅಧ್ಯಕ್ಷರಾದ ಪಲ್ಲವಿ ಕೊಡಗು ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬಾಸುಮ ಕೊಡಗು ನಿರ್ದೇಶನದ 'ಕೋವಿ ಮತ್ತು ಕೊಳಲು' ಚಿತ್ರದ ಟೀಸರ್ ಬಿಡುಗಡೆಯನ್ನು ಮಾಡಲಾಗುವುದು.
ಒಂದು ವಾರದ ಸಾಂಸ್ಕೃತಿಕ ಹಬ್ಬದ ಮೊದಲ ದಿನ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ 'ಛತ್ರಪತಿ ಶಿವಾಜಿ' ನಾಟಕ ಪ್ರದರ್ಶನ ನಡೆಯಲಿದೆ. ಸೆ. 10 ರಂದು ಕುದ್ರೋಳಿ ಗಣೇಶ್ ಮ್ಯಾಜಿಕ್ ಪ್ರದರ್ಶನ, ಸೆ. 11 ರಂದು ಕಾಪು ರಂಗತರಂಗ ತಂಡದ 'ವಿಕ್ರಂ ವೇದ' ನಾಟಕ, ಸೆ. 12 ರಂದು ಜೆಪಿ ತೂಮಿನಾಡ್ ನಿರ್ದೇಶನದ 'ಕಥೆ ಎಡ್ಡೆಂಡು' ನಾಟಕ, ಸೆ. 13 ಸಂಜೆ 4 ಗಂಟೆಯಿಂದ 'ಅನ್ನೋನ್ಯ ದಂಪತಿ ಸ್ಪರ್ಧೆ', ಸೆ. 14 ಸಾವಿತ್ರಿ ನಾಟ್ಯಶಾಲಾ ಕಲಾವಿದರಿಂದ ನೃತ್ಯವೈಭವ, ಸೆ. 15 ಕಾಸರಗೊಡಿನ ಯಕ್ಷಪುತ್ಥಳಿ ಟ್ರಸ್ಟ್ ವತಿಯಿಂದ 'ಯಕ್ಷಗಾನ ಗೊಂಬೆಯಾಟ' ಪ್ರದರ್ಶನ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸಪ್ತಾಹದ ನಿರ್ದೇಶಕರಾದ ಬಾಸುಮ ಕೊಡಗು ಮಾತನಾಡಿ, ಬಾಸುಮ ಕೊಡಗು ನಿರ್ದೇಶನ ಹಾಗೂ ಎಂಪೀರಿಯಾ ಎಂಟರ್ಟೈಸ್ಟೆಂಟ್ ಪ್ರೈ ಲಿ. ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ಕೋವಿ ಮತ್ತು ಕೊಳಲು' ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಸೆಪ್ಟೆಂಬರ್ 9ರಂದು ಸಂಜೆ 6 ಗಂಟೆಗೆ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ. ಖ್ಯಾತ ಚಿತ್ರನಿರ್ದೇಶಕ ಜೆ ಪಿ ತೂಮಿನಾಡ್ ಟೀಸರ್ ರಿಲೀಸ್ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ ನಟರಾದ ಗೋಪಿನಾಥ್ ಭಟ್, ಪ್ರಕಾಶ್ ತೂಮಿನಾಡ್, ನವೀನ್ ಡಿ ಪಡೀಲ್, ದೀಪಕ್ ರೈ ಪಾಣಾಜೆ ನಿರ್ಮಾಪಕರ ತಂಡದ ನಿಶಾನ್ ಕೃಷ್ಣ ಭಂಡಾರಿ, ಲೋಹಿತ್ ಶೆಟ್ಟಿ, ಹೇಮಂತ್ ಕುಲಾಲ್, ದೀಪಕ್ ಶೆಟ್ಟಿ, ಸಂಗೀತಾ ಶರತ್, ಚಂದ್ರಶೇಖರ್ ಪೂಜಾರಿ, ಸುಭೋದ್, ಪಿಎಸ್ ಫಿಲಂಸ್ ಕುಮಾರ್ ಡಿಬಿ ಹಾಗೂ ಚಿತ್ರದ ಕಥೆಗಾರರಾದ ಗುರುರಾಜ್ ಮಾರ್ಪಳ್ಳಿ ಉಪಸ್ಥಿತರಿರುತ್ತಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವನಸುಮ ವೇದಿಕೆ ಉಪಾಧ್ಯಕ್ಷ ಭಾಸ್ಕರ್ ಯುಕೆ, ಕಾವ್ಯವಾಣಿ ಕೊಡಗು, ಸಮ್ಯ ಹೆಗಡೆ ಉಪಸ್ಥಿತರಿದ್ದರು.