-->
 ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇ.ಡಿ ದಾಳಿ

ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇ.ಡಿ ದಾಳಿ


ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಗಳೂರು ನಿವಾಸ ಸೇರಿದಂತೆ ಬೆಳಗಾವಿ ಮತ್ತು ಗೋಕಾಕ್‌ನಲ್ಲಿರುವ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಬುಧವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದೆ.

ಜಾರಕಿಹೊಳಿ ಕುಟುಂಬಕ್ಕೆ ಸೇರಿದ ವ್ಯವಹಾರ ಸಂಸ್ಥೆಗಳು, ಕುಟುಂಬ ಸದಸ್ಯರು ಹಾಗೂ ಆಪ್ತರ ನಿವಾಸಗಳು ಸೇರಿದಂತೆ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಇ.ಡಿ. ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ವರ್ಷದ ಜೂನ್ ತಿಂಗಳಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಳಿಬಂದಿದ್ದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಈ ಪ್ರಕರಣದ ತನಿಖೆಯ ಮುಂದುವರಿದ ಭಾಗವಾಗಿ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ), 2002ರ ಅಡಿಯಲ್ಲಿ ಇ.ಡಿ. ತನಿಖೆ ಕೈಗೊಂಡಿದೆ ಎನ್ನಲಾಗಿದೆ.

ಸಚಿವ ಸತೀಶ್ ಜಾರಕಿಹೊಳಿ ಅವರ ಭಾಮೈದ ಹಾಗೂ ಹಿರಿಯ ಅಬಕಾರಿ ಇಲಾಖೆಯ ಅಧಿಕಾರಿಯಾಗಿರುವ ವೈ. ಮಂಜುನಾಥ್ ವಿರುದ್ಧವೂ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ನಿಯಮಗಳನ್ನು ಉಲ್ಲಂಘಿಸಿ ಮದ್ಯದಂಗಡಿ ಮತ್ತು ಬಾರ್ ಪರವಾನಗಿಗಳನ್ನು ನೀಡುವ ಮೂಲಕ ಅಕ್ರಮ ಆಸ್ತಿ ಸಂಪಾದನೆ ಮಾಡಲಾಗಿದೆ ಎಂಬ ಆರೋಪ ಪ್ರಕರಣದ ಹಿನ್ನೆಲೆಯಲ್ಲಿದೆ.

ವಿದೇಶದಲ್ಲಿ ಹಣ ಹೂಡಿಕೆಗೆ ಸಹಕಾರ ನೀಡಿದ ಆರೋಪವೂ ಕೇಳಿಬಂದಿದ್ದು, ಸುಮಾರು 3 ಕೋಟಿ ರೂ. ಮೊತ್ತದ ಅಕ್ರಮ ವಿದೇಶಿ ಹಣದ ವ್ಯವಹಾರ ಪತ್ತೆಯಾಗಿತ್ತು ಎಂದು ಹೇಳಲಾಗಿದೆ. ಸಚಿವ ಸ್ಥಾನದಲ್ಲಿದ್ದ ಸಂದರ್ಭದಲ್ಲಿ ಪ್ರಭಾವ ಬಳಸಿ ಸುಮಾರು 18 ಬಾರ್ ಪರವಾನಗಿಗಳನ್ನು ಮಂಜೂರು ಮಾಡಲಾಗಿದೆ ಎಂಬ ಆರೋಪವೂ ತನಿಖೆಯ ವ್ಯಾಪ್ತಿಗೆ ಬಂದಿದೆ.

ಬಾರ್ ಲೈಸೆನ್ಸ್‌ಗಳ ಮಂಜೂರಾತಿ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪಗಳ ಹಿನ್ನೆಲೆ ಇ.ಡಿ. ಈ ದಾಳಿ ನಡೆಸಿದೆ ಎಂದು ತಿಳಿದುಬಂದಿದ್ದು, ಅಧಿಕಾರಿಗಳ ಪರಿಶೀಲನೆ ಮುಂದುವರಿದಿದೆ.

Ads on article

Advertise in articles 1

advertising articles 2

Advertise under the article