-->
'ಮರ್ಮೇನ್’ ರೂಪದಲ್ಲಿ ಬೀದಿಗಿಳಿದ ಬಡಮಕ್ಕಳ ಹೀರೋ ರವಿ ಕಟಪಾಡಿ

'ಮರ್ಮೇನ್’ ರೂಪದಲ್ಲಿ ಬೀದಿಗಿಳಿದ ಬಡಮಕ್ಕಳ ಹೀರೋ ರವಿ ಕಟಪಾಡಿ


ಕಳೆದ ಹದಿನಾಲ್ಕು ವರ್ಷಗಳಿಂದ ಕೃಷ್ಣಾಷ್ಟಮಿ ಪ್ರಯುಕ್ತ ವಿಭಿನ್ನ ವೇಷಗಳನ್ನು ಧರಿಸಿ ಬೀದಿಗಿಳಿದು ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ನೆರವಾಗುತ್ತಿರುವ ರವಿ ಕಟಪಾಡಿ ಅವರು ಈ ಬಾರಿ ‘ಮರ್ಮೇನ್’ (Merman) ವೇಷ ಧರಿಸಿ ಬೀದಿಗಿಳಿದಿದ್ದಾರೆ.


ಪುರಾಣ ಕಥೆಗಳಲ್ಲಿ ಕಾಣಿಸಿಕೊಳ್ಳುವ ಕಾಲ್ಪನಿಕ ಸಮುದ್ರ ಜೀವಿಯ ರೂಪವಾದ ಮರ್ಮೇನ್ ವೇಷವನ್ನು ತೊಟ್ಟು ಇಂದಿನಿಂದ ಎರಡು ದಿನ  ಸಾರ್ವಜನಿಕರ ಮುಂದೆ ಬರುತ್ತಿದ್ದಾರೆ. ಈ  ಮೂಲಕ ಸಂಗ್ರಹವಾಗುವ ಹಣವನ್ನು ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ನೀಡಲು ಮುಂದಾಗಿದ್ದಾರೆ. 

ಕಳೆದ ಹತ್ತು ವರ್ಷಗಳಲ್ಲಿ ‘ರವಿ ಫ್ರೆಂಡ್ಸ್ ಕಟಪಾಡಿ’ ತಂಡದ ಮೂಲಕ ಒಟ್ಟು 1.85 ಕೋಟಿ ಹಣವನ್ನು ಸಂಗ್ರಹಿಸಿ 204 ಅನಾರೋಗ್ಯ ಪೀಡಿತ ಮಕ್ಕಳಿಗೆ ಹಸ್ತಾಂತರಿಸಲಾಗಿದೆ. ಈ ಬಾರಿ 15 ಲಕ್ಷ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ. ಈ ಬಾರಿ ಸಂಗ್ರಹವಾಗುವ ಹಣವನ್ನು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ಒಂದು ಮಗು ಹಾಗೂ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗೆ ವಿನಿಯೋಗಿಸಲು ನಿರ್ಧರಿಸಲಾಗಿದೆ್,

ಈ ಬಾರಿ ತಾನು ಧರಿಸುತ್ತಿರುವ ವೇಷವು ಕೊನೆಯದಾಗಿದ್ದು, ಮುಂದಿನ ವರ್ಷಗಳಿಂದ ಕೃಷ್ಣಾಷ್ಟಮಿ ಸಂದರ್ಭದಲ್ಲಿ ವೇಷ ಧರಿಸುವುದನ್ನು ನಿಲ್ಲಿಸುವುದಾಗಿ ರವಿ ಕಟಪಾಡಿ ತಿಳಿಸಿದ್ದಾರೆ. ವೇಷ ಧರಿಸಲು ನಿರಂತರವಾಗಿ ರಾಸಾಯನಿಕಗಳನ್ನು ಬಳಸುತ್ತಿರುವುದರಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಈ ಹಿನ್ನೆಲೆಯಲ್ಲಿ ವೇಷ ಧರಿಸುವ ಕಾರ್ಯದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದರು. ಆದರೆ ವೇಷ ಧರಿಸುವುದನ್ನು ನಿಲ್ಲಿಸಿದರೂ, ಪುಟಾಣಿ ಮಕ್ಕಳಿಗೆ ತನ್ನಿಂದಾಗುವ ಸಹಾಯವನ್ನು ಮುಂದುವರಿಸುವುದಾಗಿ ರವಿ ಕಟಪಾಡಿ ಭರವಸೆ ನೀಡಿದ್ದಾರೆ.

ಕ್ಯಾನ್ಸರ್​ ಪೀಡಿತ ಮಕ್ಕಳ ಚಿಕಿತ್ಸೆಗೆ ಧನ ಸಹಾಯ ಮಾಡಲಿಚ್ಛಿಸುವವರು ರವಿ. ಕೆ., ಬ್ಯಾಂಕ್​ ಆಫ್​ ಬರೋಡ, ಪಾಂಗಳ ಶಾಖೆ, ಖಾತೆ ಸಂಖ್ಯೆ- 84350200000018, IFSC code- BARB0VJPANG ಕೊಡುಗೆ ನೀಡಬಹುದು.  


 

Ads on article

Advertise in articles 1

advertising articles 2

Advertise under the article