ಫಳ್ನೀರ್‌ನ ಬ್ಲಿಂಕಿಟ್ ಡಾರ್ಕ್ ಸ್ಟೋರ್ ಮೇಲೆ ಆಹಾರ ಇಲಾಖೆ ದಿಢೀರ್ ದಾಳಿ
ಗ್ರಾಹಕರೊಬ್ಬರು ಆರ್ಡರ್ ಮಾಡಿದ್ದ ಮೊಟ್ಟೆಯ ಪ್ಯಾಕೆಟ್‌ನಲ್ಲಿ ಒಡೆದ, ಕೊಳೆತ ಮೊಟ್ಟೆ ಹಾಗೂ ಹುಳುಗಳು ಪತ್ತೆಯಾದ ದೂರಿನ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ಮಂಗಳೂರು ನಗರದ ಫಳ್ನೀರ್‌ನಲ್ಲಿರುವ ಬ್ಲಿಂಕಿಟ್ ಡಾರ್ಕ್ ಸ್ಟೋರ್ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.
ತಪಾಸಣೆ ವೇಳೆ ಗೋಡೌನ್‌ನಲ್ಲಿ ಭಾರಿ ಪ್ರಮಾಣದ ನೈರ್ಮಲ್ಯ ಕೊರತೆ ಹಾಗೂ ಅವ್ಯವಸ್ಥೆ ಕಂಡುಬಂದ ಹಿನ್ನೆಲೆಯಲ್ಲಿ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸುವ ಕೊಠಡಿಯನ್ನು ತಾತ್ಕಾಲಿಕವಾಗಿ ಸೀಜ್ ಮಾಡಲಾಗಿದೆ ಎಂದು ಆಹಾರ ಸುರಕ್ಷತಾ ಅಧಿಕಾರಿ ಡಾ. ಪ್ರವೀಣ್ ಕುಮಾರ್ ತಿಳಿಸಿದ್ದಾರೆ.
ಮಂಗಳೂರಿನ ಹಂಪನಕಟ್ಟೆ ನಿವಾಸಿ ಅಬ್ದುಲ್ ರಹಮಾನ್ ಅವರು ಸೆಪ್ಟೆಂಬರ್ 1ರಂದು ಬ್ಲಿಂಕಿಟ್ ಆ್ಯಪ್ ಮೂಲಕ ಮೊಟ್ಟೆಗಳನ್ನು ಆರ್ಡರ್ ಮಾಡಿದ್ದರು. ಅವರಿಗೆ ವಿತರಿಸಲಾದ ‘ಚಿಕೋ ವೈಟ್ ಎಗ್ಸ್’ ಪ್ಯಾಕೆಟ್ ಒಡೆದು ಹೋಗಿದ್ದು, ಅದರೊಳಗೆ ಕೊಳೆತ ಮೊಟ್ಟೆ ಹಾಗೂ ಹುಳುಗಳು ಪತ್ತೆಯಾಗಿದ್ದವು. ಈ ಕುರಿತು ಅವರು ಫೋಟೋ ಹಾಗೂ ಲಿಖಿತ ದಾಖಲೆಗಳೊಂದಿಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ದೂರು ಸಲ್ಲಿಸಿದ್ದರು.
ದೂರನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಸಚಿವರ ನಿರ್ದೇಶನದ ಮೇರೆಗೆ ಮಂಗಳೂರಿನ ಆಹಾರ ಸುರಕ್ಷತಾ ಅಧಿಕಾರಿ ಡಾ. ಪ್ರವೀಣ್ ಕುಮಾರ್ ನೇತೃತ್ವದ ತಂಡ ಗುರುವಾರ ರಾತ್ರಿ ಫಳ್ನೀರ್ ಸ್ಕ್ವೇರ್ ಕಟ್ಟಡದಲ್ಲಿರುವ ಬ್ಲಿಂಕಿಟ್‌ನ ಡಾರ್ಕ್ ಸ್ಟೋರ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿತು.
ತಪಾಸಣೆ ವೇಳೆ ಮಾರಾಟಕ್ಕೆ ಇಡಲಾಗಿದ್ದ ಹಲವು ಮೊಟ್ಟೆಯ ಟ್ರೇ ಹಾಗೂ ಪ್ಯಾಕೆಟ್‌ಗಳಲ್ಲಿ ಒಡೆದ ಮತ್ತು ಕೊಳೆತ ಮೊಟ್ಟೆಗಳು ಪತ್ತೆಯಾಗಿವೆ. ಅವುಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿಡುವ ಸ್ಥಳದಲ್ಲಿ ನಿಯಮಾನುಸಾರ ನೈರ್ಮಲ್ಯ ಕಾಪಾಡದಿರುವುದೂ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಸಂಪೂರ್ಣ ಮಳಿಗೆ ಹಾಗೂ ಆಹಾರ ಸಂಗ್ರಹಣಾ ಪ್ರದೇಶವನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಸಂಗ್ರಹಣಾ ಕೊಠಡಿಯನ್ನು ತಾತ್ಕಾಲಿಕವಾಗಿ ಸೀಜ್ ಮಾಡಲಾಗಿದೆ.
ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಬ್ಲಿಂಕಿಟ್ ಸಂಸ್ಥೆಗೆ ಆಹಾರ ಸುರಕ್ಷತಾ ಕಾಯ್ದೆಯಡಿ ಅಧಿಕೃತ ನೋಟಿಸ್ ಜಾರಿಗೊಳಿಸಲಾಗಿದ್ದು, ಕಂಡುಬಂದಿರುವ ಲೋಪಗಳ ಕುರಿತು ಸೂಕ್ತ ಸಮಜಾಯಿಷಿ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.