ಹಿರಿಯ ಸಮಾಜ ಸೇವಕ, ಉದ್ಯಮಿ ತೋನ್ಸೆ ಶೇಖ್ ಬುಡನ್ ಬಾಷಾ ಸಾಹೇಬ್ ನಿಧನ
ಉಡುಪಿಯ ಹಿರಿಯ ಸಮಾಜ ಸೇವಕ, ಉದ್ಯಮಿ ಹಾಗೂ ವಿವಿಧ ಧಾರ್ಮಿಕ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದ ತೋನ್ಸೆ ಶೇಖ್ ಬುಡನ್ ಬಾಷಾ ಸಾಹೇಬ್ ಅವರು ಇಂದು ನಿಧನರಾದರು.
1937ರ ನವೆಂಬರ್ 6ರಂದು ಉಡುಪಿ ನಗರದ ತೋನ್ಸೆ ಬೆಂಗ್ರೆಯಲ್ಲಿ ಜನಿಸಿದ್ದ ಶೇಖ್ ಬುಡನ್ ಬಾಷಾ ಸಾಹೇಬರು, ತಮ್ಮ ವೃತ್ತಿ ಜೀವನವನ್ನು ಕಾರ್ಕಳ ಮುನ್ಸಿಫ್ ನ್ಯಾಯಾಲಯದಲ್ಲಿ ಆರಂಭಿಸಿದ್ದರು. ಬಳಿಕ 1971ರಲ್ಲಿ ಕತಾರ್‌ನ ದೋಹಾಗೆ ತೆರಳಿ ವಾಣಿಜ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು.
ಸುಮಾರು 30 ವರ್ಷಗಳ ಕಾಲ ಕತಾರ್‌ನ ಪ್ರತಿಷ್ಠಿತ ಮಾರ್ಸ್ ಟ್ರೇಡಿಂಗ್ ಕಂಪೆನಿಯಲ್ಲಿ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದ ಅವರು, 2001ರಲ್ಲಿ ಉಡುಪಿಗೆ ಮರಳಿ ನೆಲೆಸಿದ್ದರು.
ಉಡುಪಿಗೆ ಮರಳಿದ ಬಳಿಕ ಸಮಾಜಸೇವೆ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು, ಉಡುಪಿ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಸುಮಾರು 9 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅಲ್ಲದೆ, ಉಡುಪಿ ಜಾಮಿಯಾ ಮಸೀದಿ ಹಾಗೂ ಕೋಡಿಬೆಂಗ್ರೆ ಜಾಮೀಯ ಮಸೀದಿಯ ಅಧ್ಯಕ್ಷರಾಗಿಯೂ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ್ದರು.
ಉಡುಪಿಯಲ್ಲಿ ಹಲವು ಏಜೆನ್ಸಿ ಹಾಗೂ ವಿತರಣಾ ವ್ಯವಹಾರಗಳನ್ನು ನಡೆಸುತ್ತಿದ್ದ ಅವರು, ಮಾರ್ಸ್ ಟ್ರೇಡರ್ಸ್ ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಸಮಾಜಮುಖಿ ಚಿಂತನೆ, ಧಾರ್ಮಿಕ ಸೇವೆ ಹಾಗೂ ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿದ್ದ ಅವರು ಇಬ್ಬರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಇಂದು ಇಶಾ ನಮಾಝ್ ಬಳಿಕ ಹೂಡೆಯ ತೋನ್ಸೆ ಖದೀಮಿ ಮಸೀದಿಯಲ್ಲಿ ನಡೆಯಲಿದೆ ಎಂದು ಅವರ ಹಿರಿಯ ಪುತ್ರ ಟಿ.ಎಸ್. ಜಫರುಲ್ಲಾ ತಿಳಿಸಿದ್ದಾರೆ.