ಉಡುಪಿ ಶ್ರೀಕೃಷ್ಣಮಠದ ಅನ್ನಬ್ರಹ್ಮ ಛತ್ರದಲ್ಲಿ ಪುಟಾಣಿ ಕೃಷ್ಣರ ಲೀಲೋತ್ಸವ
Friday, September 04, 2026
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉಡುಪಿಯ ಶ್ರೀಕೃಷ್ಣ ಮಠದ ಅನ್ನಬ್ರಹ್ಮ ಛತ್ರದಲ್ಲಿ ನಡೆದ ಜೂನಿಯರ್ ಮುದ್ದು ಕೃಷ್ಣ ಸ್ಪರ್ಧೆಯು ಶ್ರೀಕೃಷ್ಣನ ಬಾಲ ಲೀಲೋತ್ಸವಕ್ಕೆ ಸಾಕ್ಷಿಯಾಯಿತು.
ವಿವಿಧ ವೇಷಭೂಷಣಗಳಲ್ಲಿ ಸಾಕ್ಷಾತ್ ಶ್ರೀಕೃಷ್ಣರಂತೆ ಕಂಗೊಳಿಸಿದ ಪುಟಾಣಿಗಳು ನೆರೆದಿದ್ದವರ ಗಮನ ಸೆಳೆದರು. ಕಾರ್ಯಕ್ರಮಕ್ಕೆ ಆಗಮಿಸಿದ ಶಿರೂರು ವೇದವರ್ಧನ ಶ್ರೀಗಳು ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳ ವಿವಿಧ ಭಂಗಿ, ವೇಷಭೂಷಣ ಹಾಗೂ ಅವರ ಮುಗ್ಧ ಲೀಲೆಗಳನ್ನು ವೀಕ್ಷಿಸಿ ಸಂತಸಪಟ್ಟರು. ಪುಟಾಣಿಗಳ ಉತ್ಸಾಹವನ್ನು ಮೆಚ್ಚಿದ ಶ್ರೀಗಳು, ಮಕ್ಕಳನ್ನು ಆಶೀರ್ವದಿಸಿ ಶುಭ ಹಾರೈಸಿದರು.
ಕೃಷ್ಣನ ಬಾಲಲೀಲೆಗಳನ್ನು ನೆನಪಿಸುವಂತೆ ಪುಟಾಣಿ ಮಕ್ಕಳು ಕೃಷ್ಣನ ವಿವಿಧ ರೂಪಗಳಲ್ಲಿ ಕಂಗೊಳಿಸಿದ್ದು, ಅನ್ನಬ್ರಹ್ಮ ಛತ್ರದ ಆವರಣದಲ್ಲಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು. ಪೋಷಕರು ತಮ್ಮ ಮಕ್ಕಳನ್ನು ಮುದ್ದು ಕೃಷ್ಣನ ವೇಷದಲ್ಲಿ ಸಿಂಗರಿಸಿ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿದ್ದು ವಿಶೇಷವಾಗಿತ್ತು.


