-->
 ಉಡುಪಿ ಕುಂಜಿಬೆಟ್ಟುವಿನಲ್ಲಿ ರಾಂಗ್ ಸೈಡ್ ವಾಹನ ಸಂಚಾರ ಕಿರಿಕಿರಿ

ಉಡುಪಿ ಕುಂಜಿಬೆಟ್ಟುವಿನಲ್ಲಿ ರಾಂಗ್ ಸೈಡ್ ವಾಹನ ಸಂಚಾರ ಕಿರಿಕಿರಿ


ಉಡುಪಿ ನಗರದ ಕುಂಜಿಬೆಟ್ಟುವಿನ ಶಾರದಾ ಕಲ್ಯಾಣ ಮಂಟಪ ಸಮೀಪದ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಸಂಚಾರ ಮಾಡುವ ಪ್ರವೃತ್ತಿ ಹೆಚ್ಚಾಗಿದ್ದು, ಸಾರ್ವಜನಿಕರ ಸುರಕ್ಷತೆಗೆ ಅಪಾಯ ಎದುರಾಗಿದೆ. 


ಶಾರದಾ ಕಲ್ಯಾಣ ಮಂಟಪ ರಸ್ತೆಯಿಂದ ಮಣಿಪಾಲದ ಕಡೆಗೆ ತೆರಳುವ ವಾಹನ ಸವಾರರು, ನಿಗದಿತ ಮಾರ್ಗದಲ್ಲಿ ಸಂಚರಿಸಿ ಕಡಿಯಾಳಿ ಬಳಿ ಯು-ಟರ್ನ್ ಪಡೆದುಕೊಳ್ಳುವ ಬದಲು, ಕಡಿಮೆ ದೂರ ಕ್ರಮಿಸುವ ಉದ್ದೇಶದಿಂದ ಹೆದ್ದಾರಿಯಲ್ಲೇ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದಾರೆ. ದ್ವಿಚಕ್ರ ವಾಹನಗಳು ಮತ್ತು ಕಾರುಗಳಷ್ಟೇ ಅಲ್ಲದೆ, ಕೆಲವೊಮ್ಮೆ ಭಾರಿ ವಾಹನಗಳೂ ರಾಂಗ್ ಸೈಡ್‌ನಲ್ಲಿ ಸಂಚರಿಸುತ್ತಿರುವುದು ಕಂಡುಬರುತ್ತಿದೆ.


ಕಡಿಮೆ ದೂರದ ಪ್ರಯಾಣಕ್ಕಾಗಿ ಸಂಚಾರ ನಿಯಮಗಳನ್ನು ಗಾಳಿಗೆ ತೂರುತ್ತಿರುವ ಈ ವಾಹನ ಸವಾರರ ವರ್ತನೆಯಿಂದ ಸರಿಯಾದ ದಿಕ್ಕಿನಲ್ಲಿ ಸಂಚರಿಸುವ ವಾಹನ ಚಾಲಕರು ಆತಂಕ ಎದುರಿಸುವಂತಾಗಿದೆ. ವೇಗವಾಗಿ ಬರುವ ವಾಹನಗಳಿಗೆ ಎದುರಿನಿಂದ ರಾಂಗ್ ಸೈಡ್‌ನಲ್ಲಿ ಬರುವ ವಾಹನಗಳು ಅನಿರೀಕ್ಷಿತವಾಗಿ ಎದುರಾಗುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ, ರಸ್ತೆ ದಾಟುವ ಪಾದಚಾರಿಗಳಿಗೂ ಇದರಿಂದ ಅಪಾಯ ಎದುರಾಗಿದೆ.

ಸಂಚಾರ ನಿಯಮಗಳ ಪ್ರಕಾರ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುವುದು ದಂಡನೀಯ ಅಪರಾಧವಾಗಿದೆ. ಇಂತಹ ಉಲ್ಲಂಘನೆಗಳಿಗೆ ದಂಡ ವಿಧಿಸುವ ಅವಕಾಶವಿದ್ದರೂ, ಕೆಲ ವಾಹನ ಸವಾರರು ನಿಯಮ ಪಾಲಿಸದೆ ಶಾರ್ಟ್‌ಕಟ್‌ಗೆ ಮೊರೆ ಹೋಗುತ್ತಿರುವುದಕ್ಕೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 

ಈ ಭಾಗದಲ್ಲಿ ಪೊಲೀಸರು ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ಮಾತ್ರ ನಿಯಮ ಪಾಲಿಸಲಾಗುತ್ತದೆ. ಪೊಲೀಸರು ಸ್ಥಳದಲ್ಲಿಲ್ಲ ಎಂಬುದು ಖಚಿತವಾದ ತಕ್ಷಣ ಮತ್ತೆ ವಿರುದ್ಧ ದಿಕ್ಕಿನಲ್ಲಿ ವಾಹನ ಸಂಚಾರ ಆರಂಭವಾಗುತ್ತದೆ. ಅದರಲ್ಲೂ ಬೆಳಗ್ಗೆ 8ರಿಂದ 11 ಗಂಟೆಯ ಅವಧಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ರಾಂಗ್ ಸೈಡ್ ಸಂಚಾರದಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದೆ ಎಂದು ಸ್ಥಳೀಯ ಅಂಗಡಿ ಮಾಲೀಕ ವಿನೋದ್ ಅವರು ತಿಳಿಸಿದ್ದಾರೆ. 

ಸಂಬಂಧಪಟ್ಟ ಸಂಚಾರ ಪೊಲೀಸರು ಈ ಪ್ರದೇಶದಲ್ಲಿ ಪರಿಶೀಲನೆ ನಡೆಸಿ, ರಾಂಗ್ ಸೈಡ್‌ನಲ್ಲಿ ಸಂಚರಿಸುವ ವಾಹನಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಹೆಚ್ಚುವರಿ ಸೂಚನಾ ಫಲಕಗಳನ್ನು ಅಳವಡಿಸಿ, ಸಿಸಿಟಿವಿ ನಿಗಾ ಹಾಗೂ ನಿಯಮಿತ ತಪಾಸಣೆ ನಡೆಸುವ ಮೂಲಕ ಈ ಸಮಸ್ಯೆಗೆ ಕಡಿವಾಣ ಹಾಕಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Ads on article

Advertise in articles 1

advertising articles 2

Advertise under the article