-->
ಟೇಕ್‌ಆಫ್‌ಗೆ ಸಿದ್ಧವಾಗುತ್ತಿದ್ದ ವೇಳೆ ತಾಂತ್ರಿಕ ದೋಷ: ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ದುರಂತ

ಟೇಕ್‌ಆಫ್‌ಗೆ ಸಿದ್ಧವಾಗುತ್ತಿದ್ದ ವೇಳೆ ತಾಂತ್ರಿಕ ದೋಷ: ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ದುರಂತ


ಬೆಂಗಳೂರಿಗೆ ತೆರಳಬೇಕಿದ್ದ ಇಂಡಿಗೋ ವಿಮಾನವೊಂದರ ಇಂಜಿನ್‌ನಲ್ಲಿ ಟೇಕ್‌ಆಫ್‌ಗೆ ಸಿದ್ಧವಾಗುತ್ತಿದ್ದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಸಂಜೆ ತಪ್ಪಿದೆ.

ಸೋಮವಾರ ಸಂಜೆ ಸುಮಾರು 6 ಗಂಟೆಗೆ 229 ಪ್ರಯಾಣಿಕರು ಹಾಗೂ 7 ಮಂದಿ ಸಿಬ್ಬಂದಿ ಸೇರಿದಂತೆ ಒಟ್ಟು 236 ಜನರಿದ್ದ ವಿಮಾನವು ಬೆಂಗಳೂರಿಗೆ ತೆರಳಲು ಸಿದ್ಧವಾಗಿತ್ತು. ಪ್ರಯಾಣಿಕರೆಲ್ಲರೂ ವಿಮಾನದಲ್ಲಿ ಕುಳಿತ ಬಳಿಕ ಟೇಕ್‌ಆಫ್‌ಗೆ ಅನುಮತಿ ದೊರೆತ ಹಿನ್ನೆಲೆಯಲ್ಲಿ ವಿಮಾನವು ರನ್‌ವೇ ಕಡೆಗೆ ಚಲಿಸಲಾರಂಭಿಸಿತ್ತು.

ಈ ವೇಳೆ ವಿಮಾನದ ಒಂದು ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಪೈಲಟ್ ವಿಮಾನಕ್ಕೆ ಬ್ರೇಕ್ ಹಾಕಿ ಅದರ ಚಲನೆಯನ್ನು ನಿಲ್ಲಿಸಿದ್ದಾರೆ. ಪೈಲಟ್ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಅಪಾಯ ತಪ್ಪಿದ್ದು, ವಿಮಾನದಲ್ಲಿದ್ದ ಎಲ್ಲ 236 ಮಂದಿ ಸುರಕ್ಷಿತವಾಗಿದ್ದಾರೆ.

ಬಳಿಕ ವಿಮಾನವನ್ನು ಸುರಕ್ಷಿತವಾಗಿ ಹಿಂದಕ್ಕೆ ಕೊಂಡೊಯ್ದು ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ಬೆಂಗಳೂರಿಗೆ ತೆರಳಬೇಕಿದ್ದ ಪ್ರಯಾಣಿಕರಿಗೆ ಇಂಡಿಗೋ ಸಂಸ್ಥೆಯು ಪರ್ಯಾಯ ವಿಮಾನದ ವ್ಯವಸ್ಥೆ ಕಲ್ಪಿಸಿತು.

ಟೇಕ್‌ಆಫ್‌ಗೆ ಸಿದ್ಧವಾಗಿದ್ದ ಸಂದರ್ಭದಲ್ಲಿ ಇಂಜಿನ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡರೂ, ಪೈಲಟ್ ತಕ್ಷಣ ಸೂಕ್ತ ನಿರ್ಧಾರ ಕೈಗೊಂಡಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

Ads on article

Advertise in articles 1

advertising articles 2

Advertise under the article