-->
 ಗ್ಯಾರಂಟಿ ಯೋಜನೆಗಳ ಸಂಭ್ರಮೋತ್ಸವದಲ್ಲಿ ಫಲಾನುಭವಿಗಳು ಮುಕ್ತ ಮನಸ್ಸಿನಿಂದ ಪಾಲ್ಗೊಳ್ಳಿ: ಮಂಜುನಾಥ ಭಂಡಾರಿ

ಗ್ಯಾರಂಟಿ ಯೋಜನೆಗಳ ಸಂಭ್ರಮೋತ್ಸವದಲ್ಲಿ ಫಲಾನುಭವಿಗಳು ಮುಕ್ತ ಮನಸ್ಸಿನಿಂದ ಪಾಲ್ಗೊಳ್ಳಿ: ಮಂಜುನಾಥ ಭಂಡಾರಿ


ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನ ಹಾಗೂ ಫಲಾನುಭವಿಗಳೊಂದಿಗೆ ನೇರ ಸಂವಾದ ನಡೆಸುವ ಉದ್ದೇಶದಿಂದ ನ.24ರಂದು ಉಡುಪಿಯಲ್ಲಿ ನಡೆಯಲಿರುವ ಜಿಲ್ಲಾ ಗ್ಯಾರಂಟಿ ಯೋಜನೆಗಳ ಮಾಹಿತಿ ಕಾರ್ಯಾಗಾರ ಹಾಗೂ ಫಲಾನುಭವಿಗಳ ಸಂಭ್ರಮೋತ್ಸವದಲ್ಲಿ ಫಲಾನುಭವಿಗಳು ಮುಕ್ತ ಮನಸ್ಸಿನಿಂದ ಪಾಲ್ಗೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಮುಖ್ಯ ಸಚೇತಕ ಮಂಜುನಾಥ ಭಂಡಾರಿ ಮನವಿ ಮಾಡಿದ್ದಾರೆ.

ಕಾರ್ಯಕ್ರಮದ ಕುರಿತು ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರು ನೀಡುತ್ತಿರುವ ಹೇಳಿಕೆಗಳು ಬಾಲಿಶತನದಿಂದ ಕೂಡಿವೆ. ಸರಕಾರದ ಯೋಜನೆಗಳು ಬಡವರ್ಗದ ಜನರನ್ನು ತಲುಪುತ್ತಿರುವುದನ್ನು ಸಹಿಸದೆ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದ್ದಾರೆ.

ರಾಜ್ಯ ಸರಕಾರದ ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳ ಫಲಾನುಭವಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, ಯೋಜನೆಗಳ ಕುರಿತು ಸಮಗ್ರ ಮಾಹಿತಿ ನೀಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಆದರೆ, ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತ್‌ಗಳ ತೆರಿಗೆ ಹಣ ಬಳಸಲಾಗುತ್ತಿದೆ ಎಂದು ಬಿಜೆಪಿ ಶಾಸಕರು ಆರೋಪಿಸಿರುವುದು ಅವರ ಅಲ್ಪಜ್ಞಾನಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ನಿಯಮಾವಳಿಗಳು, ಅರ್ಹತಾ ಮಾನದಂಡಗಳು, ಹೊಸ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹಾಗೂ ತಾಂತ್ರಿಕ ಅಡಚಣೆಗಳ ನಿವಾರಣೆ ಕುರಿತು ವಿಶೇಷ ಮಾಹಿತಿ ಕಾರ್ಯಾಗಾರ ನಡೆಯಲಿದೆ. ಫಲಾನುಭವಿಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ವಿಶೇಷ ಮಾಹಿತಿ ಮಳಿಗೆಗಳನ್ನೂ ತೆರೆಯಲಾಗುತ್ತದೆ. ಗ್ರಾಮ ಪಂಚಾಯತ್‌ಗಳಿಂದ ಪಡೆಯಲಾಗುವ 25 ಸಾವಿರ ರೂ.ಗಳನ್ನು ಸಮಾವೇಶಕ್ಕೆ ಆಗಮಿಸುವ ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಹಾಗೂ ಯೋಜನೆಗಳ ಮಾಹಿತಿ ನೀಡುವ ಕಾರ್ಯಕ್ಕೆ ಬಳಸಲಾಗುತ್ತದೆಯೇ ಹೊರತು ದುಂದುವೆಚ್ಚ ಮಾಡಲಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಗ್ಯಾರಂಟಿ ಸಭೆಗಳಲ್ಲಿ ಭಾಗವಹಿಸದ ಬಿಜೆಪಿ ನಾಯಕರು ಮಾಹಿತಿ ಕೊರತೆಯಿಂದಾಗಿ ಅಲ್ಲಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆಧಾರರಹಿತ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು. ಗ್ಯಾರಂಟಿ ಸಂಭ್ರಮೋತ್ಸವದಿಂದ ಗ್ರಾಮ ಪಂಚಾಯತ್‌ಗಳು ದಿವಾಳಿಯಾಗುತ್ತವೆ ಎಂಬ ಆರೋಪ ಮೂರ್ಖತನದಿಂದ ಕೂಡಿದೆ. ಮತದಾರರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಿರುವ ಬಿಜೆಪಿ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಡಿ ಮನೆ ಯಜಮಾನಿಯ ಖಾತೆಗೆ ನೇರವಾಗಿ ಜಮೆಯಾಗುವ ಹಣ ಕುಟುಂಬದ ದಿನಸಿ ಹಾಗೂ ಮಕ್ಕಳ ಶಿಕ್ಷಣದ ಖರ್ಚಿಗೆ ನೆರವಾಗುತ್ತಿದೆ. ಗೃಹಜ್ಯೋತಿ ಯೋಜನೆಯಿಂದ ತಿಂಗಳಿಗೆ ಸುಮಾರು 800ರಿಂದ 1,000 ರೂ. ವಿದ್ಯುತ್ ಬಿಲ್ ಉಳಿತಾಯವಾಗುತ್ತಿದೆ. ಶಕ್ತಿ ಯೋಜನೆಯಿಂದ ಉದ್ಯೋಗಕ್ಕೆ ಹಾಗೂ ಕಾಲೇಜಿಗೆ ತೆರಳುವ ಮಹಿಳೆಯರಿಗೆ ತಿಂಗಳಿಗೆ 1,500ರಿಂದ 2,000 ರೂ. ಉಳಿತಾಯವಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಪ್ರತಿಯೊಬ್ಬರಿಗೆ 10 ಕೆ.ಜಿ. ಅಕ್ಕಿ ದೊರೆಯುತ್ತಿದೆ. ಯುವನಿಧಿ ಯೋಜನೆಯಡಿ ಪದವೀಧರ ನಿರುದ್ಯೋಗಿಗಳಿಗೆ ತಿಂಗಳಿಗೆ 3,000 ರೂ. ಹಾಗೂ ಡಿಪ್ಲೊಮಾ ಪದವೀಧರರಿಗೆ 1,500 ರೂ.ಗಳಂತೆ ಎರಡು ವರ್ಷಗಳವರೆಗೆ ನೆರವು ನೀಡಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಈ ಐದು ಯೋಜನೆಗಳಿಂದ ಒಂದು ಬಡ ಕುಟುಂಬಕ್ಕೆ ತಿಂಗಳಿಗೆ ಸರಾಸರಿ 4,500ರಿಂದ 5,500 ರೂ.ವರೆಗೆ ನೇರವಾಗಿ ಅಥವಾ ಪರೋಕ್ಷವಾಗಿ ಆರ್ಥಿಕ ಲಾಭ ದೊರೆಯುತ್ತಿದೆ. ಗೃಹಲಕ್ಷ್ಮಿ ಯೋಜನೆಯ ಸುಮಾರು 118 ಕೋಟಿ ರೂ.ಗಳಷ್ಟು ಹಣ ಮೃತರು, ಅನರ್ಹ ಫಲಾನುಭವಿಗಳು ಹಾಗೂ ಬೇನಾಮಿ ಖಾತೆಗಳಿಗೆ ಜಮೆಯಾಗಿರುವ ವಿಚಾರವೂ ಗಮನದಲ್ಲಿದೆ. ಸರಕಾರದ ವಿವಿಧ ಯೋಜನೆಗಳಲ್ಲಿರುವ ಇಂತಹ ಲೋಪಗಳನ್ನು ತಡೆದು, ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆಗಳ ಸೌಲಭ್ಯ ತಲುಪಿಸುವುದೇ ಗ್ಯಾರಂಟಿ ಸಂಭ್ರಮೋತ್ಸವದ ಮುಖ್ಯ ಉದ್ದೇಶವಾಗಿದೆ ಎಂದು ಮಂಜುನಾಥ ಭಂಡಾರಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article