ಕೊಲ್ಲೂರು ಮೂಕಾಂಬಿಕಾ ಸನ್ನಿಧಿಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿ
Monday, November 16, 2026
ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಪತ್ನಿ, ಪುತ್ರ ಹಾಗೂ ಕುಟುಂಬಿಕರೊಂದಿಗೆ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದರು.
ಕರಾವಳಿ ಜಿಲ್ಲೆಯಲ್ಲಿ ಎರಡು ದಿನಗಳ ದೇಗುಲ ಭೇಟಿಯ ಭಾಗವಾಗಿ ಆಗಮಿಸಿದ ಕುಮಾರಸ್ವಾಮಿ ಕುಟುಂಬವು ಸೋಮವಾರ ಬೆಳಗ್ಗೆ ಕೊಲ್ಲೂರು ಸನ್ನಿಧಿಯಲ್ಲಿ ವಿಶೇಷ ನವಚಂಡಿಕಾ ಯಾಗವನ್ನು ನೆರವೇರಿಸಿತು.
ಕುಟುಂಬದ ದೋಷ ಪರಿಹಾರ ಹಾಗೂ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹರಕೆಗಳನ್ನು ತೀರಿಸುವ ಉದ್ದೇಶದಿಂದ ಈ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು. ಶ್ರೀಕಾಂತ್ ಅಡಿಗ ಅವರ ನೇತೃತ್ವದಲ್ಲಿ ಬೆಳಗ್ಗೆ 6 ಗಂಟೆಗೆ ಆರಂಭವಾದ ನವಚಂಡಿಕಾ ಯಾಗವು ಬೆಳಗ್ಗೆ 10 ಗಂಟೆಗೆ ಪೂರ್ಣಾಹುತಿಯೊಂದಿಗೆ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಸಚಿವರ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಅವರ ಪತ್ನಿ ಸೇರಿದಂತೆ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಜೆಡಿಎಸ್ ಮುಖಂಡರಾದ ಸಬ್ಲಾಡಿ ಮಂಜಯ್ಯ ಶೆಟ್ಟಿ, ಯೋಗೀಶ್ ಶೆಟ್ಟಿ, ಮನ್ಸೂರ್ ಇಬ್ರಾಹಿಂ ಮರವಂತೆ, ಹುಸೇನ್ ಹೈಕಾಡಿ, ಸಂದೇಶ್ ಭಟ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.