ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ದನ ಕಳ್ಳತನಕ್ಕೆ ವಿಫಲ ಯತ್ನ; ಸಿಸಿಟಿವಿಯಲ್ಲಿ ದೃಶ್ಯ ಸೆರೆ
Monday, November 16, 2026
ಉಡುಪಿ ಜಿಲ್ಲೆಯ ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ದನ ಕಳ್ಳತನಕ್ಕೆ ಇಬ್ಬರು ಅಪರಿಚಿತ ವ್ಯಕ್ತಿಗಳು ವಿಫಲ ಯತ್ನ ನಡೆಸಿರುವ ಘಟನೆ ಭಾನುವಾರ ಮುಂಜಾನೆ ನಡೆದಿದೆ.
ಕಾರಿನಲ್ಲಿ ಬಂದ ಇಬ್ಬರು ಅಪರಿಚಿತರು ದೇವಸ್ಥಾನದ ಸಮೀಪ ಮಲಗಿದ್ದ ಜಾನುವಾರುಗಳನ್ನು ಕಳವು ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಕಾರಿನಿಂದ ಕೆಳಗಿಳಿದು ದನಗಳ ಬಳಿಗೆ ಬರುತ್ತಿದ್ದ ಇಬ್ಬರನ್ನು ಗಮನಿಸಿದ ಜಾನುವಾರುಗಳ ಹಿಂಡು ಬೆದರಿ ಏಕಾಏಕಿ ಓಡಿಹೋಗಿದೆ. ಇದರಿಂದ ಜಾನುವಾರುಗಳು ಕಳ್ಳರ ಕೈಗೆ ಸಿಗದೆ ಪಾರಾಗಿವೆ.
ಜಾನುವಾರುಗಳು ಓಡಿಹೋದ ಬಳಿಕವೂ ಕೆಲಕಾಲ ಸ್ಥಳದಲ್ಲೇ ಕಾದಿದ್ದ ಆರೋಪಿಗಳು, ಕೊನೆಗೆ ಕಾರಿನಲ್ಲಿ ಅಲ್ಲಿಂದ ಪರಾರಿಯಾಗಿದ್ದಾರೆ. ದನ ಕಳ್ಳತನಕ್ಕೆ ಯತ್ನಿಸಿದ ಇಬ್ಬರು ಅಪರಿಚಿತರ ಚಲನವಲನಗಳು ದೇವಸ್ಥಾನದ ಸಮೀಪ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ ಎಂದು ತಿಳಿದುಬಂದಿದೆ.