ಲಾರಿ ಡಿಕ್ಕಿ ಹೊಡೆದು ಶಾಲಾ ಬಾಲಕಿ ಸ್ಥಳದಲ್ಲೇ ಸಾವು
Friday, November 20, 2026
ರಸ್ತೆ ದಾಟುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಶಾಲಾ ಬಾಲಕಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ ಸಮೀಪದ ನೇರಳಕಟ್ಟೆಯಲ್ಲಿ ಗುರುವಾರ ಸಂಜೆ ಸಂಭವಿಸಿದೆ.
ಮೃತ ಬಾಲಕಿಯನ್ನು ನೇರಳಕಟ್ಟೆ ನಿವಾಸಿ, ಕಂಬಳಬೆಟ್ಟುವಿನ ಜನಪ್ರಿಯ ಸೆಂಟ್ರಲ್ ಶಾಲೆಯ ವಿದ್ಯಾರ್ಥಿನಿ ಫಾತಿಮಾ ಇಝಾ ಇಲ್ಯಾಸ್ ಎಂದು ಗುರುತಿಸಲಾಗಿದೆ.
ಫಾತಿಮಾ ಶಾಲೆ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಮಾಣಿ–ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದಳು. ಈ ಸಂದರ್ಭದಲ್ಲಿ ಮಾಣಿ ಕಡೆಯಿಂದ ಗುಜರಾತ್ ನೋಂದಣಿಯ GJ-27-TD-3022 ಸಂಖ್ಯೆಯ ಲಾರಿಯನ್ನು ಚಾಲಕ ಕೊಕಾಡಿ ಮೊಹಮ್ಮದ್ ಜನಾಫ್ ರೆಹಮಾನ್‌ಬಾಯ್ (30) ಎಂಬಾತನು ದುಡುಕುತನದಿಂದ ಚಲಾಯಿಸಿಕೊಂಡು ಬಂದು ಬಾಲಕಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ತಕ್ಷಣ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.