
Bangalore: ಶಕ್ತಿ ಯೋಜನೆ;ಮಹಿಳಾ ಪ್ರಯಾಣಿಕರಿಗೆ 500ನೇ ಕೋಟಿ ಟಿಕೆಟ್ ವಿತರಣೆ
ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಜನಪ್ರಿಯವೆನಿಸಿರುವ ಸರಕಾರಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಉಚಿತ ಪ್ರಯಾಣದ ಶಕ್ತಿ ಯೋಜನೆ ಹೊಸ ಮೈಲಿಗಲ್ಲಿ ಸ್ಥಾಪಿಸಿದ್ದು, ಇಂದು 500ನೇ ಕೋಟಿ ಟಿಕೆಟ್ ಉಚಿತ ವಿತರಣೆ ತಲುಪಲಿದೆ.
ಕಾಂಗ್ರೆಸ್ ಸರಕಾರ ಅಸ್ಥಿತ್ವಕ್ಕೆ ಬಂದ ನಂತರ 2023ರ ಜೂನ್ 11ರಂದು ಅನುಷ್ಠಾನಕ್ಕೆ ಬಂದ ಶಕ್ತಿ ಗ್ಯಾರಂಟಿ ಯೋಜನೆಯಡಿ ಕಳೆದ 2 ವರ್ಷ ಒಂದು ತಿಂಗಳ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಸರಕಾರಿ ಸಾರಿಗೆ ಸಂಸ್ಥೆಯ 4 ನಿಗಮಗಳ ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ಇದುವರೆಗೆ ಮಹಿಳಾ ಪ್ರಯಾಣಿಕರಿಗೆ ವಿತರಣೆ ಮಾಡಿದ ಉಚಿತ ಟಿಕೆಟ್‌ಗಳ ಸಂಖ್ಯೆ 500 ಕೋಟಿ ತಲುಪಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು 500ನೇ ಕೋಟಿ ಉಚಿತ ಟಿಕೆಟ್ ವಿತರಣೆಗೆ ಸಾಕ್ಷಿಯಾಗಲಿದ್ದಾರೆ. ಕೆಎಸ್‌ಆರ್‌ಟಿಸಿ, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಬಿಎಂಟಿಸಿ ಸಾರಿಗೆ ಸಂಸ್ಥೆಯ ಸಾಮಾನ್ಯ ಸಾರಿಗೆ ಬಸ್ ಗಳಲ್ಲಿ ಇದುವರೆಗೆ ಅಂದಾಜು 840 ಕೋಟಿ ಟಿಕೆಟ್‌ಗಳನ್ನು ಪಡೆದು ಪ್ರಯಾಣಿಕರು ಪ್ರಯಾಣಿಸಿದ್ದು ಇದರಲ್ಲಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪಡೆದ ಟಿಕೆಟ್‌ಗಳ ಸಂಖ್ಯೆ 500ಕೋಟಿಗಳಷ್ಟಾಗಿದೆ. ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರು ಉಚಿತ ಟಿಕೆಟ್ ಪಡೆದು ಪ್ರಯಾಣಿಸಿದ ಟಿಕೆಟ್‌ಗಳ ಮೌಲ್ಯ ಅಂದಾಜು 12,600 ಕೋಟಿ ರೂಪಾಯಿಗಳಾಗಿದೆ. ಪ್ರತಿ ದಿನ ಅಂದಾಜು 80 ಲಕ್ಷಕ್ಕೂ ಹೆಚ್ಚಿನ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯಡಿ ಉಚಿತ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದಾರೆ.
ಶಕ್ತಿ ಯೋಜನೆ ಸಂಭ್ರಮ: "ಮಹಿಳಾ ಪ್ರಯಾಣಿಕರಿಗೆ ಇಂದು 500ನೇ ಕೋಟಿಯ ಉಚಿತ ಟಿಕೆಟ್ ನೀಡುವ ಹಿನ್ನೆಲೆಯಲ್ಲಿ ಸಂಭ್ರಮ ಆಚರಿಸಲಾಗುತ್ತದೆ" 500ನೇ ಕೋಟಿಯ ಟಿಕೆಟ್‌ನ್ನು ಮಹಿಳಾ ಪ್ರಯಾಣಿಕರಿಗೆ ಸಿಎಂ, ಡಿಸಿಎಂ ಬಸ್‌ನಲ್ಲಿ ಸಂಚರಿಸಿ ವಿತರಣೆ ಮಾಡಲಿದ್ದಾರೆ. ಮಹಿಳಾ ಪ್ರಯಾಣಿಕರಿಗೆ ಈ ವೇಳೆ ಉಡುಗೊರೆ ನೀಡಲಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಒಂದು ಬಸ್‌ನ್ನು ಅಲಂಕರಿಸಿ ಮಹಿಳಾ ಪ್ರಯಾಣಿಕರಿಗೆ ಸಿಹಿ ಮತ್ತು ಹೂವನ್ನು ನೀಡಲಾಗುತ್ತದೆ.