Bangalore:ಆಟೋ ಪ್ರಯಾಣಿಕರ ಜೇಬಿಗೆ ಕತ್ತರಿ; ದರ ಪರಿಷ್ಕರಣೆಗೆ ನಿರ್ಧಾರ

Bangalore:ಆಟೋ ಪ್ರಯಾಣಿಕರ ಜೇಬಿಗೆ ಕತ್ತರಿ; ದರ ಪರಿಷ್ಕರಣೆಗೆ ನಿರ್ಧಾರ

ಬೆಂಗಳೂರು ನಗರದಲ್ಲಿ ಆಟೋ ಪ್ರಯಾಣ ಇನ್ನು ಮುಂದೆ ದುಬಾರಿಯಾಗಲಿದೆ. ಈಗಾಗಲೇ ಮೆಟ್ರೋ ದರ, ರೈಲ್ವೆ ಟಿಕೆಟ್ ದರ, ಬಸ್ ಟಿಕೆಟ್ ದರ ಕೂಡ ದುಬಾರಿಯಾಗಿದೆ. ಇದರ ಬೆನ್ನಲ್ಲೇ ಆಟೋ ಪ್ರಯಾಣ ದರ ಕೂಡ ಹೆಚ್ಚಳವಾಗಿದೆ. ಆಟೋ ಪ್ರಯಾಣ ದರ ನಿಗದಿ ಮಾಡಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆಗಸ್ಟ್ 1ರಿಂದ ಈ ಪರಿಷ್ಕೃತ ದರ ಪಟ್ಟಿ ಜಾರಿಗೆ ಬರಲಿದ್ದು, ಪ್ರಯಾಣಿಕರು ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ. ಆಟೋ ಚಾಲಕರ ಸಂಘಟನೆಗಳ ಬೇಡಿಕೆ, ಇಂಧನ ದರ ಹಾಗೂ ನಿರ್ವಹಣಾ ವೆಚ್ಚ ಹೆಚ್ಚಳವೇ ಈ ದರ ಪರಿಷ್ಕರಣೆಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಹೊಸ ದರ ಪಟ್ಟಿ ಜಾರಿಗೆ ಬರುವ ಹಿನ್ನೆಲೆಯಲ್ಲಿ ಆಟೋ ಚಾಲಕರು ಸರ್ಕಾರ ನಿಗದಿ ಮಾಡಿದ ದರವನ್ನೇ ವಿಧಿಸಬೇಕು. ಹೆಚ್ಚುವರಿ ದರ ವಸೂಲಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರ್‌ಟಿಒ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. 


ಬೆಂಗಳೂರಿನಲ್ಲಿ ಈಗ ಎರಡು ಕಿ.ಮೀ ಪ್ರಯಾಣಕ್ಕೆ ಆಟೋ ಮೀಟರ್ ದರ ಕನಿಷ್ಠ 30 ರೂಪಾಯಿ ಇದೆ. ಇನ್ನು ಮುಂದೆ ಎರಡು ಕಿ.ಮೀಗೆ 36 ರೂಪಾಯಿ ಪಾವತಿಸಬೇಕು. ಕನಿಷ್ಠ ಎರಡು ಕಿಲೋಮೀಟರ್ ಪ್ರಯಾಣಕ್ಕೆ ದರ ಈಗಿನ 30ರಿಂದ 36ಕ್ಕೆ ಏರಿಕೆ ಮಾಡಲಾಗಿದೆ. ಈ ಮೂಲಕ 6 ರೂಪಾಯಿ ಹೆಚ್ಚಳವಾಗಿದೆ. ಪ್ರತಿ ಹೆಚ್ಚುವರಿ ಕಿಲೋಮೀಟರ್‌ಗೆ 15 ಬದಲು 18 ಪಾವತಿಸಬೇಕು.

ಕಾಯುವಿಕೆ ದರ (ವೇಟಿಂಗ್) ಮೊದಲ ಐದು ನಿಮಿಷ ಉಚಿತವಾಗಿದೆ. ಮೊದಲ ಐದು ನಿಮಿಷದ ನಂತರ ಪ್ರತಿ 15 ನಿಮಿಷ ಅಥವಾ ಅದರ ಭಾಗಕ್ಕೆ 10 ರೂಪಾಯಿ ನಿಗದಿ ಮಾಡಲಾಗಿದೆ. ಪ್ರಯಾಣಿಕರ ಲಗೇಜು ದರ 20 ಕೆ.ಜಿ.ವರೆಗೆ ಉಚಿತ. 20 ಕೆ.ಜಿಗಿಂತ ಹೆಚ್ಚು ಲಗೇಜ್ ಇದ್ದರೆ ಹೆಚ್ಚುವರಿಯಾಗಿ 10 ರೂಪಾಯಿ ನಿಗದಿ ಮಾಡಲಾಗಿದೆ. ಗರಿಷ್ಠ ಪ್ರಯಾಣಿಕರ ಲಗೇಜ್ 50 ಕೆ.ಜಿ.ಗೆ ಮಿತಿಗೊಳಿಸಲಾಗಿದೆ. ರಾತ್ರಿ ವೇಳೆ ಸಾಮಾನ್ಯ ದರದ ಜೊತೆಗೆ ಆ ದರದ ಅರ್ಧಪಟ್ಟು ಹೆಚ್ಚು ಪಡೆಯಬಹುದು. ಇದು ರಾತ್ರಿ 10 ಗಂಟೆಯಿ0ದ ಬೆಳಿಗ್ಗೆ 5 ಗಂಟೆಯವರೆಗೆ ಮಾತ್ರ ಅನ್ವಯವಾಗಲಿದೆ ಎಂದು ತಿಳಿದು ಬಂದಿದೆ. 







Ads on article

Advertise in articles 1

advertising articles 2

Advertise under the article