
Padubidre: ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ
13/07/2025 12:52 PM
ಉಡುಪಿ ಜಿಲ್ಲೆಯ ಪಡುಬಿದ್ರಿ, ಕೋಟ ಮತ್ತು ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳವು ಪ್ರಕರಣಗಳಣ್ನು ಬೇಧಿಸಿರುವ ಪೊಲೀಸರು ಇಬ್ಬರು ಅಂತರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಕುಂಬಳೆ ಮೊಗ್ರಾಲ್ ಮೂಲದ ಪುತ್ತೂರು ತಾಲೂಕಿನ ಕೊಯ್ಲ ಗ್ರಾಮದ ಕಲಾಯಿ ನಿವಾಸಿ ಇಬ್ರಾಹಿಂ ಕಲಂದರ್ ಹಾಗೂ ಕಾಸರಗೋಡು ಜಿಲ್ಲೆಯ ಕುಂಬಳೆ ಉರ್ಮಿಚಾಲ್ ಬೇಕೂರು ನಿವಾಸಿ ನಿವಾಸಿ ರಿಯಾಝ್ ಯಾನೆ ಕಡಪ್ಪ ರಿಯಾಝ್ ಬಂಧಿತ ಆರೋಪಿಗಳು. ಜೂ.22ರಂದು ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಪಾದೆಬೆಟ್ಟು ಗ್ರಾಮದ ಕಾಮತ್ ಪೆಟ್ರೋಲ್ ಪಂಪ್ ಬಳಿ ಗಣೇಶ್‌ಪ್ರಸಾದ್ ಶೆಟ್ಟಿ ಎಂಬವರ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನದ ಸರವನ್ನು ಕಳವು ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು.ಈ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಿ, ಆರೋಪಿಯನ್ನು ಬಂಧಿಸಿ, ಕಳ್ಳತನಕ್ಕೆ ಉಪಯೋಗಿಸಿದ ಕಾರನ್ನು ಮತ್ತು 24,000ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇಬ್ರಾಹಿಂ ಕಲಂದರ್ ವಿರುದ್ಧ ಈಗಾಗಲೇ ಕಾಸರಗೋಡು ಜಿಲ್ಲೆಯ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಎರಡು ದೇವಸ್ಥಾನ ಕಳವು, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಒಂದು ಮನೆ ಕಳವು, ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಒಂದು ದರೋಡೆಗೆ ಪ್ರಯತ್ನ, ಮೇಲ್ಪರಂಭ ಠಾಣೆಯಲ್ಲಿ ಮನೆ ಕಳವು ಹಾಗೂ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಮುನಿಯಲು ಸೊಸೈಟಿ ದರೋಡೆ, ವಿಟ್ಲ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಬ್ಯಾಂಕ್ ದರೋಡೆ ಪ್ರಕರಣ, ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಅಡಿಕೆ ಕಳವು ಪ್ರಕರಣ, ಪುತ್ತೂರು ನಗರ ಮತ್ತು ಗ್ರಾಮಾಂತರ ಠಾಣೆಯಲ್ಲಿ 4 ಮನೆ ಕಳವು ಪ್ರಕರಣ, ಕಡಬ ಪೊಲೀಸ್ ಠಾಣೆಯಲ್ಲಿ ಸರ ಕಳ್ಳತನ, ಉಪ್ಪಿನಂಗಡಿ ಠಾಣೆಯಲ್ಲಿ ಅಂಗಡಿ ಕಳವು, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಂಗಡಿ ಕಳವು, ಮಡಿಕೇರಿ ಜಿಜಿಲ್ಲೆಯ ಕುಶಾಲನಗರ ಠಾಣೆಯಲ್ಲಿ ಕಳವು ಪ್ರಕರಣಗಳು ದಾಖಲಾಗಿವೆ. ಈತ ಫೆ.15ರಂದು ಕೇರಳ ರಾಜ್ಯದ ಹೊಸದುರ್ಗ ಜಿಲ್ಲಾ ಕಾರಾಗೃಹದಿಂದ ಬಿಡುಗಡೆ ಹೊಂದಿದ್ದನು.
ರಿಯಾಝ್ ವಿರುದ್ಧ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಂಬಳೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ಹಾಗೂ ಪುತ್ತೂರು ನಗರ ಠಾಣೆಯಲ್ಲಿ ಗಾಂಜಾ ಮಾರಾಟ ಪ್ರಕರಣ ದಾಖಲಾಗಿದ್ದು, ಈತ ಕೂಡ ಮೇ 12ರಂದು ಕಾಸರಗೋಡು ಸಬ್‌ಜೈಲಿನಿಂದ ಬಿಡುಗಡೆ ಹೊಂದಿದ್ದನು.ಉಡುಪಿ ಎಸ್ಪಿ ಹರಿರಾಮ್ ಶಂಕರ ಆದೇಶದಂತೆ ಜಿಲ್ಲಾ ಹೆಚ್ಚುವರಿ ಎಸ್ಪಿಗಳಾದ ಸದಾನಂದ ನಾಯಕ್ ಮತ್ತು ಪರಮೇಶ್ವರ ಹೆಗಡೆ ಮಾರ್ಗದರ್ಶನ ದಂತೆ ಕಾರ್ಕಳ ಎಎಸ್ಪಿ ಹರ್ಷ ಪ್ರಿಯಾಂವಧ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.