
Uttarkhand:ಸರ್ಕಾರಿ ಶಾಲೆಗಳಲ್ಲಿ ಭಗವದ್ಗೀತೆ ಕಡ್ಡಾಯ;ಉತ್ತರಕಾಂಡ ಸರ್ಕಾರ ಆದೇಶ
17/07/2025 08:08 AM
ಎಲ್ಲ ಸರಕಾರಿ ಶಾಲೆಗಳಲ್ಲಿ ಬೆಳಗ್ಗಿನ ಪ್ರಾರ್ಥನೆ ಸಮಾವೇಶದ ವೇಳೆ ಭಗವದ್ಗೀತೆ ಶ್ಲೋಕಗಳ ಪಠಣವನ್ನು ಸೇರ್ಪಡೆ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಿ ಉತ್ತರಾಖಂಡ ಸರಕಾರ ಆದೇಶ ಹೊರಡಿಸಿದೆ. ವಿದ್ಯಾರ್ಥಿಗಳಲ್ಲಿ ಸಾಂಪ್ರದಾಯಿಕ ಭಾರತೀಯ ಜ್ಞಾನದೊಂದಿಗೆ ಆಧುನಿಕ ಶಿಕ್ಷಣವನ್ನು ಸಮ್ಮಿಶ್ರಣಗೊಳಿಸುವ ಹಾಗೂ ಸ್ವಯಂ ಶಿಸ್ತು, ನಾಯಕತ್ವ ಹಾಗೂ ಭಾವನಾತ್ಮಕ ಸಮತೋಲನವನ್ನು ಉತ್ತೇಜಿಸುವ ಗುರಿಯನ್ನು ಈ ಕ್ರಮ ಒಳಗೊಂಡಿದೆ.
ಈ ಸಂಬ0ಧ ಅಧಿಕೃತ ಆದೇಶ ಹೊರಡಿಸಿರುವ ಪ್ರೌಢ ಶಿಕ್ಷಣ ಮಂಡಳಿಯ ನಿರ್ದೇಶಕ ಡಾ. ಮುಕುಲ್ ಕುಮಾರ್ ಸತಿ, ವಿದ್ಯಾರ್ಥಿಗಳು ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಬೇಕು ಎಂದು ಮಾತ್ರ ಸೂಚಿಸಿಲ್ಲ. ಬದಲಿಗೆ, ಅವುಗಳ ಅರ್ಥ ಮತ್ತು ವೈಜ್ಞಾನಿಕ ಪ್ರಸ್ತುತತೆ ಕುರಿತೂ ವಿವರಿಸಿದ್ದಾರೆ.ಶಿಕ್ಷಕರು ‘ವಾರದ ಶ್ಲೋಕ’ವನ್ನು ಆಯ್ಕೆ ಮಾಡಿಕೊಂಡು, ಅದನ್ನು ಶಾಲೆಯ ನೋಟಿಸ್ ಬೋರ್ಡ್ ನಲ್ಲಿ ಪ್ರದರ್ಶಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದ್ದು, ಆ ಶ್ಲೋಕವನ್ನು ಕಲಿತು, ಅದನ್ನು ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಎಂದೂ ಆದೇಶಿಸಲಾಗಿದೆ. ವಾರದ ಕೊನೆಯಲ್ಲಿ ಈ ಶ್ಲೋಕದ ಕುರಿತ ಚರ್ಚೆಗಳು ಮತ್ತು ವಿದ್ಯಾರ್ಥಿಗಳು ಅನಿಸಿಕೆಗಳು ತರಗತಿಯ ಚಟುವಟಿಕೆಗಳ ಭಾಗವಾಗಿರುತ್ತವೆ ಎಂದೂ ಹೇಳಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ, ೨೦೨೦ರ ಭಾಗವಾಗಿ ಈ ಉಪಕ್ರಮವನ್ನು ಕೈಗೊಳ್ಳಲಾಗಿದ್ದು, ಈ ನೀತಿಯ ಭಾರತದ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಯ ಸಮಗ್ರತೆಯನ್ನು ಆಧುನಿಕ ಶಿಕ್ಷಣ ಚೌಕಟ್ಟಿನೊಳಗೆ ತರಲು ಉತ್ತೇಜಿಸುತ್ತದೆ.