ಫೆ. 2: ಹಿಂದುಳಿದ ಬ್ರಾಹ್ಮಣ ಸಮುದಾಯಕ್ಕೆ ಕಾರ್ಮಿಕ ಕಾರ್ಡ್ ಕುರಿತು ಮಾಹಿತಿ
ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯಕ್ಕೆ ಕಾರ್ಮಿಕ ಕಾರ್ಡ್ ನೀಡುತ್ತಿದ್ದು, ಈ ಬಗ್ಗೆ ಮಾಹಿತಿ ಕಾರ್ಯಕ್ರಮವು ಫೆ.2ರಂದು ಉಡುಪಿಯ ಗೋವಿಂದ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶ್ರೀಕಾಂತ್ ಉಪಾದ್ಯಾಯ ತಿಳಿಸಿದ್ದಾರೆ.
ಉಡುಪಿಯಲ್ಲಿ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಫೆ. 2ರಂದು ಸಂಜೆ 4 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮದ ನಿರ್ದೇಶಕ ಪಿ.ಎಂ ಮಾಲ್ತೇಶ್ ಮಾಹಿತಿ ನೀಡಲಿದ್ದಾರೆ. ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜ್ಯೋತಿ ಹೆಬ್ಬಾರ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಕಾರ್ಡ್ನ ಸೌಲಭ್ಯ ಪಡೆದುಕೊಳ್ಳುವವರು 18ರಿಂದ 60 ವರ್ಷ ವಯಸ್ಸಿನವರಾಗಿರಬೇಕು. ಇಎಸ್‌ಐ ಮತ್ತು ಇಪಿಎಫ್ ಸೌಲಭ್ಯ ಹೊಂದಿರಬಾರದು. ಈ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ರೇಶನ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಜೊತೆಗೆ ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು.
ಈ ಕಾರ್ಡ್ನಿಂದ ಅಪಘಾತದಿಂದ ಮರಣ ಹೊಂದಿದರೆ ಅವರ ನಾಮ ನಿರ್ದೇಶಕರಿಗೆ 1 ಲಕ್ಷ ಪರಿಹಾರ, 50 ಸಾವಿರವರೆಗೆ ಅಪಘಾತದ ಆಸ್ಪತ್ರೆ ವೆಚ್ಚ ಭರಿಸಲು ಸಹಕಾರಿಯಾಗಲಿದೆ. ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿAದ ಸಿಗುವ ಈ ಸೌಲಭ್ಯಗಳು ಬ್ರಾಹ್ಮಣ ಸಮುದಾಯದ ಅರ್ಚಕರು, ಸಹಾಯಕರು, ಅಡುಗೆ ಮಾಡುವವರು, ಜ್ಯೋತಿಷ್ಯ ಹೇಳು ವವರು ಹಾಗೂ ಅಸಂಘಟಿತ ವಲಯದ ಬ್ರಾಹ್ಮಣರಿಗೆ ಸಿಗಲಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ಬ್ರಾಹ್ಮಣ ಸಮುದಾಯದ ಮುಖಂಡರಾದ ದುರ್ಗಾಪ್ರಸಾದ್ ಭಾರ್ಗವ್, ಶಂಕರ್, ಶ್ರೀನಿವಾಸ ಬಲ್ಲಾಳ್, ಹಯವದನ ಭಟ್ ಹಾಗೂ ರಾಜೇಂದ್ರ ಭಟ್ ಮೊದಲಾದವರು ಉಪಸ್ಥಿತರಿದ್ದರು.