ಅವಧಿ ಮೀರಿ ರಾತ್ರಿ ವೇಳೆ ಹೋಟೆಲ್ ಕಾರ್ಯಾಚರಣೆ: ಪ್ರಕರಣ ದಾಖಲು
Thursday, May 07, 2026
ಮಣಿಪಾಲದ ನಗರ ಪ್ರದೇಶಗಳಲ್ಲಿ ರಾತ್ರಿ ವೇಳೆ ಹೋಟೆಲ್‌ಗಳು ಮತ್ತು ಫಾಸ್ಟ್‌ಫುಡ್ ಕೇಂದ್ರಗಳು ನಿಗದಿತ ಅವಧಿ ಮೀರಿ ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಹೆಚ್ಚುತ್ತಿರುವ ದೂರುಗಳ ನಡುವೆಯೇ ಮಣಿಪಾಲ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಶಿವಳ್ಳಿ ಗ್ರಾಮದ ವಿ.ಎಸ್. ಆಚಾರ್ಯ ರಸ್ತೆಯಲ್ಲಿರುವ ಓಡಿಸ್ಸಿ ಕಟ್ಟಡದ ಸಮೀಪದ ರೂಸ್ಟರ್’ಹೋಟೆಲ್ ವಿರುದ್ಧ ಸಾರ್ವಜನಿಕ ಉಪದ್ರವ ಪ್ರಕರಣ ದಾಖಲಾಗಿದೆ.
ಮಣಿಪಾಲ ಪೊಲೀಸರು ರಾತ್ರಿ ಗಸ್ತು ತಿರುಗುವ ವೇಳೆ ಹೋಟೆಲ್‌ನಲ್ಲಿ ಅವಧಿ ಮೀರಿ ಗಿರಾಕಿಗಳಿಗೆ ಪಾರ್ಸೆಲ್ ವಿತರಣೆ ನಡೆಯುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ. ಹೋಟೆಲ್‌ಗೆ ಉಡುಪಿ ನಗರದ ವಿವಿಧ ಭಾಗಗಳಿಂದ ಜನರು ಆಗಮಿಸಿ ಗುಂಪುಗೂಡುತ್ತಿದ್ದ ಪರಿಣಾಮ, ಸುತ್ತಮುತ್ತಲಿನ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ರಾತ್ರಿ ವೇಳೆ ಶಬ್ದ ಮತ್ತು ವಾಹನ ಸಂಚಾರದಿಂದ ತೊಂದರೆ ಉಂಟಾಗುತ್ತಿತ್ತು ಎನ್ನಲಾಗಿದೆ. ಸ್ಥಳೀಯ ನಿವಾಸಿಗಳ ದೂರು ಆಧರಿಸಿ ಪೊಲೀಸರು ತಕ್ಷಣ ಹೋಟೆಲ್ ಮುಚ್ಚಿಸಿದ್ದಾರೆ. ಮಾಹಿತಿ ಪ್ರಕಾರ, ಹೋಟೆಲ್ ಮಾಲೀಕರಿಗೆ ಈ ಹಿಂದೆಯೇ ಹಲವಾರು ಬಾರಿ ನಿಗದಿತ ಸಮಯಕ್ಕೆ ವ್ಯಾಪಾರ ಸ್ಥಗಿತಗೊಳಿಸುವಂತೆ ಮೌಖಿಕ ಸೂಚನೆ ನೀಡಲಾಗಿತ್ತು. ಆದಾಗ್ಯೂ, ಯಾವುದೇ ವಿಶೇಷ ಪರವಾನಿಗೆ ಪಡೆಯದೇ ಅವಧಿ ಮೀರಿ ಕಾರ್ಯಾಚರಣೆ ಮುಂದುವರಿಸಿರುವ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟುಮಾಡಿ ಆರೋಪದಡಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.