ಇ ಸ್ವತ್ತು ತಂತ್ರಾಂಶದಲ್ಲಿ ನಮೂನೆ ಎ11, 11ಬಿ ವಿತರಣೆಯಲ್ಲಿ ತಾಂತ್ರಿಕ ದೋಷ ಸರಿಪಡಿಸಲು ಮನವಿ
ಇ-ಸ್ವತ್ತು ತಂತ್ರಾಂಶದಲ್ಲಿ ನಮೂನೆ 11ಎ & 11 ಬಿ ವಿತರಿಸುವಲ್ಲಿ ಎದುರಾಗುತ್ತಿರುವ ತಾಂತ್ರಿಕ ದೋಷಗಳ ಪರಿಹರಿಸುವಂತೆ ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ್ ಭಂಡಾರಿ ಅವರಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ ಅವರು ಮನವಿ ಸಲ್ಲಿಸಿದರು.
ಇ ಸ್ವತ್ತು 2.0 ತಂತ್ರಾಂಶ ಜಾರಿಯಾದಾಗಿನಿಂದ ತಾಂತ್ರಿಕ ದೋಷಗಳಿದ್ದು ಹಲವು ತಾಂತ್ರಿಕ ದೋಷಗಳು ಶಾಶ್ವತ ಪರಿಹಾರವಾಗಿದೆ. ಇನ್ನೂ ಕೆಲವು ತಾಂತ್ರಿಕ ದೋಷಗಳಿಂದಾಗಿ ದಿನಂಪ್ರತಿ ಸಾರ್ವಜನಿಕರಿಗೆ ಗ್ರಾಮಪಂಚಾಯತ್ ಗಳು ನಮೂನೆ 11 ಎ ಮತ್ತು 11 ಬಿ ವಿತರಿಸುತ್ತಿಲ್ಲ. ಸಾರ್ವಜನಿಕರು ಕಟ್ಟಡ ಸಂಬಂಧಿತ ನಮೂನೆ 11 ಎ ಮತ್ತು 11 ಬಿ ಗೆ ಅರ್ಜಿ ಸಲ್ಲಿಸುವಾಗ ಮೆಸ್ಕಾಂ ಐಡಿ ಯನ್ನು ನಮೂದಿಸುವುದು ಕಡ್ಡಾಯವಾಗಿದೆ. ಆದರೆ ಕಳೆದ ಒಂದು ತಿಂಗಳಿನಿಂದ ಮೆಸ್ಕಾಂ ಐಡಿ ನಮೂದಿಸಲು ಸಾಧ್ಯವಾಗದೆ ಸಾರ್ವಜನಿಕರಿಗೆ ಅರ್ಜಿಗಳನ್ನೇ ಸಲ್ಲಿಸಲು ಆಗುತ್ತಿಲ್ಲ.
ಸರಕಾರದ ಯೋಜನೆಯಡಿ ಮಂಜೂರಾದ 94CC ಮತ್ತು 94 C ಆಸ್ತಿಗಳನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಿಂದ ಅನುಮೋದನೆಗೊಂಡು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನುಮೋದನೆ ನೀಡುವಾಗ ಸರ್ವರ್ ಸಮಸ್ಯೆ ಬರುತ್ತಿದ್ದು ಗ್ರಾಮಪಂಚಾಯತ್ ಗಳಲ್ಲಿ ಇ ಸ್ವತ್ತು ವಿತರಿಸಲು ಸಮಸ್ಯೆಯಾಗುತ್ತಿದೆ. ಸಾರ್ವಜನಿಕರು ಕ್ರಯ ಸಾಧನದ ಮೂಲಕ ಅರ್ಜಿ ಸಲ್ಲಿಸುವುದು ಕಡ್ಡಾಯವಿದ್ದು, ಕೆಲವೊಂದು ಕ್ರಯ ಸಾಧನದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನುಮೋದನೆ ನೀಡುವಾಗ ಚೆಕ್ ಬಂಧಿ ನಮೂದಿಸಲು ಸಾಧ್ಯವಾಗುತ್ತಿಲ್ಲ.
ಇ ಸ್ವತ್ತು 2.0 ಮೂಲಕ ಸೃಜಿಸಲಾದ ಆಸ್ತಿಗಳು ಪಂಚತಂತ್ರ 2.0 ತಂತ್ರಾಂಶದಲ್ಲಿ ಸ್ವಯಂ ಲೆಕ್ಕಾಚಾರವಾಗದೆ ಹಲವಾರು ಆಸ್ತಿಗಳಿಗೆ ತೆರಿಗೆ ನಮೂದಾಗದೆ ಸಾರ್ವಜನಿಕರು ಆಸ್ತಿ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗುತ್ತಿಲ್ಲ. ಅಪಾರ್ಟೆಂಟ್ ವಿವರಗಳನ್ನು ಅನುಮೋದಿಸುವಾಗ ಮತ್ತು 11 ಬಿ ಯಿಂದ 11 ಎ ಗೆ ಬದಲಾಯಿಸುವಾಗ ತಾಂತ್ರಿಕ ಸಮಸ್ಯೆ ಬರುತ್ತಿದೆ. ಇ ಸ್ವತ್ತು 2.0 ತಂತ್ರಾಂಶದ ಮೂಲಕ ಸಲ್ಲಿಸಿದ ಅರ್ಜಿಗಳ ಸ್ಥಿತಿಯನ್ನು ಅರಿಯಲು ಸಾರ್ವಜನಿಕರಿಗೆ ಸಾಧ್ಯವಾಗುತ್ತಿಲ್ಲ. ಆದುದರಿಂದ ಈ ಎಲ್ಲಾ ತಾಂತ್ರಿಕ ದೋಷಗಳಿಗೆ ಶೀಘ್ರ ಪರಿಹಾರ ನೀಡುವಂತೆ ಮನವಿ ಮಾಡಲಾಯಿತು.