ವೆಟ್ ವೆಲ್ ನಿಂದ ಕಾಲುವೆಗೆ ಮಲಿನ ನೀರು: ನಿಟ್ಟೂರು ಗರಡಿ ರಸ್ತೆ ಪರಿಸರದಲ್ಲಿ ದುರ್ನಾತ
Saturday, May 02, 2026
ಉಡುಪಿಯ ನಿಟ್ಟೂರು ಗರಡಿ ರಸ್ತೆಯ ಪರಿಸರವಿಡೀ ಗಬ್ಬು ನಾರುತ್ತಿದೆ. ಸುಮಾರು 200ಕ್ಕೂ ಅಧಿಕ ಮನೆಗಳಿರುವ ಈ ಪರಿಸರದಲ್ಲಿ ಪ್ರತೀ ವರ್ಷದಂತೆ ಈ ಬೇಸಿಗೆಯಲ್ಲೂ ದುರ್ಮಾತದ ಸಮಸ್ಯೆ ತಪ್ಪಿಲ್ಲ.
ನಿಟ್ಟೂರಿನ ಗರಡಿ ರಸ್ತೆಯಲ್ಲಿ ಮಳೆ ನೀರು ಹರಿದು ಹೋಗುವ ಕಾಲುವೆಯುದ್ದಕ್ಕೂ ಗಾಢ ಕಂದು ಬಣ್ಣದ ಕೊಳಚೆ ನೀರು ನಿಂತು ಪರಿಸರವಿಡೀ ದುರ್ವಾಸನೆ ಬೀರುತ್ತಿದೆ. ಅಲ್ಲಲ್ಲಿ ಕಸದ ರಾಶಿ, ನಿಂತ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗಿದೆ. ಈ ಸಮಸ್ಯೆ ಈ ವರ್ಷವೇನೂ ಮೊದಲಲ್ಲ. ಪ್ರತೀ ಬೇಸಿಗೆಯಲ್ಲೂ ಈ ಭಾಗದ ನಿವಾಸಿಗಳು ಗಬ್ಬು ವಾಸನೆ, ಸೊಳ್ಳೆ ಕಾಟದಿಂದ ಕಾಯಿಲೆ ತುತ್ತಾಗುತ್ತಿದ್ದಾರೆ. ಸಮೀಪದ ಮನೆಯ ಬಾವಿಗಳ ನೀರು ಕೂಡಾ ಕಲುಷಿತಗೊಂಡಿದೆ.
ಸಮಸ್ಯೆಗೆ ಕಾರಣವೇನು:- ಬನ್ನಂಜೆಯಿಂದ ನಿಟ್ಟೂರು ವಾರ್ಡ್ ಸಂಪರ್ಕಿಸುವ ರಸ್ತೆಯ ಎರಡೂ ಕಡೆಗಳಲ್ಲಿ ತ್ಯಾಜ್ಯಗಳನ್ನು ಎಸೆಯಲಾಗುತ್ತಿದೆ. ಇತ್ತೀಚೆಗೆ ಸಿಸಿ ಕ್ಯಾಮರಾಗಳನ್ನು ಹಾಕಿ ಕ್ರಮಕೈಗೊಂಡಿರುವುದರಿಂದ ಕಸ ಎಸೆಯುವವರ ಸಂಖ್ಯೆ ಕಡಿಮೆಯಾಗಿದೆ ಎನ್ನುತ್ತಾರೆ ಸ್ಥಳೀಯರು. ಆದರೆ ಕೆಲವೊಂದಿಷ್ಟು ಜನ ರಾತ್ರೋ ರಾತ್ರಿ ಕಸ ಎಸೆದು ಹೋಗುತ್ತಾರೆ. ಇನ್ನು ರಾಷ್ಟ್ರೀಯ ಹೆದ್ದಾರಿ 169ರ ಬದಿಯಿಂದ ರಾಜಕಾಲುವೆ ಮೂಲಕ ಸಾಗಿ ಹೋಗಿರುವ ಒಳಚರಂಡಿ ನೀರಿನ ಪೈಪ್‌ಲೈನ್‌ನಲ್ಲಿ ನೀರು ಸರಾಗವಾಗಿ ಹರಿದು ಹೋಗುವುದಿಲ್ಲ. ಹೆದ್ದಾರಿ ಬದಿಯಲ್ಲಿಯೇ ನೀರು ಮೇಲಕ್ಕೆ ಚಿಮ್ಮುತ್ತದೆ.
ಉಡುಪಿಯ ಗುಂಡಿಬೈಲು ಪ್ರದೇಶದಲ್ಲಿ ನಗರಸಭೆಯ ಒಳಚರಂಡಿ ಯೋಜನೆಯ ಭಾಗವಾಗಿ ವೆಟ್ ವೆಲ್ (Wet Well) ಘಟಕವನ್ನು ಸ್ಥಾಪಿಸಲಾಗಿದೆ. ಈ ಭಾಗದ ಮನೆಗಳಿಂದ ಬರುವ ಒಳಚರಂಡಿ ನೀರನ್ನು ಸಂಗ್ರಹಿಸಿ, ಪಂಪ್‌ಗಳ ಮೂಲಕ ಸಂಸ್ಕರಣಾ ಘಟಕಕ್ಕೆ ಸಾಗಿಸುವುದು ಇದರ ಮುಖ್ಯ ಕೆಲಸವಾಗಿದೆ. ಉಡುಪಿ ನಗರಸಭೆಯು 55 ಕೋಟಿಗೂ ಅಧಿಕ ವೆಚ್ಚದಲ್ಲಿ ಕೈಗೊಂಡ ಚರಂಡಿ ಅಭಿವೃದ್ಧಿ ಯೋಜನೆಯಲ್ಲಿ ಇದು ಒಂದು ಪ್ರಮುಖ ಭಾಗವಾಗಿದೆ. ಗುಂಡಿಬೈಲು ವಾರ್ಡ್‌ನ ಆಯಕಟ್ಟಿನ ಜಾಗದಲ್ಲಿ ನಿರ್ಮಿಸಲಾಗಿರುವ ಈ ವೆಟ್ ವೆಲ್ ವೆಟ್ ನಿಂದ ರಾತ್ರೋ ರಾತ್ರೋ ಈ ಘಟಕದಿಂದ ತ್ಯಾಜ್ಯ ನೀರನ್ನು ಕಾಲುವೆಗೆ ಬಿಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ವೆಟ್ ವೆಲ್ ನಲ್ಲಿ ಕೊಳಚೆ ನೀರಿನ ಸರಿಯಾದ ನಿರ್ವಹಣೆಯಿಲ್ಲದೇ ಸಮಸ್ಯೆಯಾಗುತ್ತಿದ್ದು, ನಗರಸಭೆ ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎನ್ನುವ ಆರೋಪ ವ್ಯಕ್ತವಾಗಿದೆ.
ನಿರ್ವಹಣೆಯ ಕೊರತೆ: ಮಳೆಗಾಲ ಕಳೆದು ಬೇಸಿಗೆ ಬಂದಾಗ ಈ ಕಾಲುವೆಯಲ್ಲಿ ನೀರಿನ ಹರಿವು ಕೊಂಚ ಕಡಿಮೆಯಾಗುತ್ತದೆ. ಕಾಲುವೆಯ ಎರಡೂ ಬದಿಗಳಲ್ಲಿ ಹುಲ್ಲು, ಕಳೆ ಗಿಡಗಳು ಬೆಳೆದು ನೀರು ಸರಾಗವಾಗಿ ಹರಿದು ಹೋಗದೇ ಅಲ್ಲಲ್ಲಿ ನಿಂತಿರುತ್ತದೆ. ಮೊದಲೆಲ್ಲಾ ನಗರಸಭೆ ವತಿಯಿಂದ ನೀರು ಹರಿದು ಹೋಗಲು ಚರಂಡಿಯನ್ನು ಮಾಡಲಾಗುತ್ತಿತ್ತು. ಮಳೆಗಾಲದಲ್ಲಿ ಹರಿದು ಬಂದ ಮರಳು ಹೂಳುಗಳನ್ನು ಬೇಸಿಗೆಯಲ್ಲಿ ತೆಗೆಯಲಾಗುತ್ತಿತ್ತು. ಆದರೆ ಒಂದೆರಡು ವರ್ಷದಿಂದ ಈ ಕೆಲಸವನ್ನು ನಗರಸಭೆ ಮರೆತಂತಿದೆ.
ರಸ್ತೆಯ ಎರಡೂ ಬದಿಯಲ್ಲಿ ಬೆಳೆದಿರುವ ಕಳೆ ಗಿಡಗಳನ್ನು ಕಡಿದು, ನಿಂತ ನೀರನ್ನು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆಗೊಳಿಸಿದರೆ ಈ ಸಮಸ್ಯೆಗೆ ತಕ್ಕ ಮಟ್ಟಿನ ಪರಿಹಾರ ಸಿಗಬಹುದು. ಸಮರ್ಪಕವಾದ ಒಳಚರಂಡಿ ವ್ಯವಸ್ಥೆ, ವೆಟ್ ವೆಲ್ ನಿಂದ ತ್ಯಾಜ್ಯ ನೀರು ಕಾಲುವೆ ಸೇರದಂತೆ ಕ್ರಮಕೈಗೊಂಡರೆ ನಿಟ್ಟೂರು ಜನ ನೆಮ್ಮದಿಯ ನಿದ್ದೆ ಮಾಡಬಹುದು. ನಗರಸಭೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿ ಬಂದಿದೆ.




