ಉಡುಪಿಯಲ್ಲಿ ಅಪಾಯದ ಕರೆಗಂಟೆ ಬಾರಿಸುತ್ತಿದೆ ಬೃಹತ್ ಮರ..!
Tuesday, April 28, 2026
ಉಡುಪಿ ನಗರದ ಹೃದಯ ಭಾಗದಲ್ಲಿರುವ ಹಳೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿಯಲ್ಲಿ ಬೃಹತ್ ಗಾತ್ರದ ಅಶ್ವತ್ಥ ಮರವೊಂದು ಅಪಾಯವನ್ನು ತಂದೊಡ್ಡಿದೆ. ಹೀಗಾಗಿ ಈ ಭಾಗದಲ್ಲಿ ಸಂಚರಿಸಲು ಸಾರ್ವಜನಿಕರು ಆತಂಕ ಪಡುವಂತಾಗಿದೆ.
ಹಲವು ವರ್ಷಗಳ ಹಳೆಯದಾದ ಈ ಮರದ ದೊಡ್ಡ ದೊಡ್ಡ ಕೊಂಬೆಗಳು ಸುತ್ತಮುತ್ತಲಿನ ಕಟ್ಟಡಗಳ ಮೇಲೆ ತೂಗಿ ನಿಂತಿದ್ದು, ಯಾವುದೇ ಕ್ಷಣದಲ್ಲಿ ಅವು ಕುಸಿಯುವ ಭೀತಿ ಎದುರಾಗಿದೆ. ಅಲ್ಲದೇ ಮರದ ಬೇರುಗಳು ಕಟ್ಟಡದ ಮೆಟ್ಟಿಲುಗಳಿಗೂ ವ್ಯಾಪಿಸಿರುವುದರಿಂದ ಕಟ್ಟಡ ಕುಸಿಯುವ ಭೀತಿ ಉಂಟಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಮರದ ಒಂದು ಕೊಂಬೆ ಮುರಿದು ಪಕ್ಕದಲ್ಲಿದ್ದ ಕಾರಿನ ಮೇಲೆ ಬಿದ್ದ ಘಟನೆ ಸಂಭವಿಸಿದ್ದರೂ ನಗರಸಭೆ ಸುರಕ್ಷಿತ ಕ್ರಮ ಕೈಗೊಂಡಿಲ್ಲ.
ಸ್ಥಳೀಯ ವ್ಯಾಪಾರಿಗಳು ಹಾಗೂ ನಿವಾಸಿಗಳು ಹಲವು ಬಾರಿ ನಗರಸಭೆಗೆ ದೂರು ನೀಡಿದ್ದರೂ ಅಧಿಕಾರಿಗಳು ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಆರೋಪ ವ್ಯಕ್ತವಾಗಿದೆ.. “ಪ್ರತಿದಿನ ನೂರಾರು ಜನ ಸಂಚರಿಸುವ ಪ್ರದೇಶ ಇದು. ಈ ಮರ ಯಾವಾಗ ಬೀಳುತ್ತದೋ ಎನ್ನುವ ಆತಂಕದಲ್ಲೇ ಇದ್ದೇವೆ,” ಎಂದು ಒಬ್ಬ ವ್ಯಾಪಾರಿ ಆತಂಕ ವ್ಯಕ್ತಪಡಿಸಿದ್ದಾರೆ.
ನಗರಸಭೆ ಅಧಿಕಾರಿಗಳು ಮರವನ್ನು ತೆರವುಗೊಳಿಸುವ ಬಗ್ಗೆ ಭರವಸೆ ನೀಡಿದ್ದರೂ, ಅದು ಕೇವಲ ಮಾತಿನಲ್ಲೇ ಉಳಿದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಮಳೆಗಾಲ ಆರಂಭಕ್ಕೆ ಇನ್ನೊಂದು ತಿಂಗಳಷ್ಟೇ ಬಾಕಿ ಇದೆ. ಆದರೆ ನಗರದೆಲ್ಲೆಡೆ ಇರುವ ಅಪಾಯಕಾರಿ ಮರಗಳ ತೆರವು ಕಾರ್ಯ ಇನ್ನೂ ನಡೆದಿಲ್ಲ. ಈ ಬೃಹತ್ ಮರವನ್ನು ಹಾಗೆಯೇ ಬಿಟ್ಟರೆ ಮಳೆಗಾಲದಲ್ಲಿ ಬಹುದೊಡ್ಡ ಅಪಾಯ ತಪ್ಪಿದ್ದಲ್ಲ. ಯಾವುದೇ ಅನಾಹುತ ಸಂಭವಿಸುವುದಕ್ಕಿಂತ ಮುನ್ನವೇ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ವಲಯದಿಂದ ಒತ್ತಾಯಗಳು ಕೇಳಿ ಬರುತ್ತಿವೆ. ಜಿಲ್ಲಾಧಿಕಾರಿಗಳೂ ಒಮ್ಮೆ ಭೇಟಿ ಪರಿಶೀಲಿಸಿದರೆ ಸಮಸ್ಯೆಯ ತೀವ್ರತೆ ಅರ್ಥವಾದೀತು.


