ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ವಿಳಂಬ ಬೇಡ, ಜನಸಾಮಾನ್ಯರಿಗೆ ಸ್ಪಂದಿಸಿ: ಬ್ಯಾಂಕ್ ಅಧಿಕಾರಿಗಳಿಗೆ ಸಂಸದ ಕೋಟ ತಾಕೀತು
Friday, January 30, 2026
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಜನಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿದ ಸಾಲ ಸೌಲಭ್ಯ, ನಿರಾಕ್ಷೇಪಣಾ ಪತ್ರ, ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಸಾಲ, ಪಿಎಂಇಜಿಪಿ, ಸ್ವ-ನಿಧಿ, ಮುದ್ರಾ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಹಾಗೂ ನಿರ್ಲಕ್ಷ ವಹಿಸಬಾರದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಬ್ಯಾಂಕ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಉಡುಪಿ ಜಿಲ್ಲಾ ಪಂಚಾಯತ್‌ನ ಡಾ. ವಿ.ಎಸ್. ಆಚಾರ್ಯ ಸಭಾಭವನದಲ್ಲಿ ಸೈಬ್ರಕಟ್ಟೆ ಬ್ಯಾಂಕ್ ಆಫ್ ಬರೋಡಾ ಶಾಖೆಯ ಗ್ರಾಹಕರು ಹಾಗೂ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಸ್ಥಳೀಯ ಗ್ರಾಹಕಿ ರೂಪಾ ಅವರು, ದೇವರಾಜ ಅರಸು ನಿಗಮದಿಂದ ಸಬ್ಸಿಡಿ ಹಣ ಬ್ಯಾಂಕಿಗೆ ಜಮಾ ಆಗಿದ್ದರೂ ಸಕಾಲದಲ್ಲಿ ಸಾಲ ಮಂಜೂರು ಮಾಡಿಲ್ಲ ಎಂದು ದೂರಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಕೋಟ, ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಯಾವುದೇ ಅನಗತ್ಯ ವಿಳಂಬ ಮಾಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಎಲ್ಲಾ ಅಹವಾಲುಗಳನ್ನು ಒಂದು ವಾರದೊಳಗೆ ಪರಿಹರಿಸಬೇಕು. ಮುಂದಿನ ಎರಡು ದಿನಗಳಲ್ಲಿ ಬ್ಯಾಂಕಿನ ಹಿರಿಯ ಅಧಿಕಾರಿಗಳು ಸಂಬಂಧಪಟ್ಟ ಶಾಖೆಗೆ ಭೇಟಿ ನೀಡಿ, ಸಭೆಯಲ್ಲಿ ಸ್ವೀಕರಿಸಿದ ದೂರುಗಳನ್ನು ನ್ಯಾಯಯುತವಾಗಿ ಬಗೆಹರಿಸಬೇಕು ಎಂದು ಸಂಸದ ಕೋಟ ಕಟ್ಟುನಿಟ್ಟಾಗಿ ಸೂಚಿಸಿದರು.
ಜನಸಾಮಾನ್ಯರ ಮಧ್ಯೆ ರಾಷ್ಟ್ರೀಕೃತ ಬ್ಯಾಂಕುಗಳು ಬಡವರ ಕಲ್ಯಾಣ ಹಾಗೂ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಪ್ರಾಮಾಣಿಕವಾಗಿ ಸಹಕರಿಸಬೇಕು. ಬಡ ಜನರ ವಾಸ್ತವಿಕ ಸ್ಥಿತಿಯನ್ನು ಅರಿತು ಬ್ಯಾಂಕ್ ಸೌಲಭ್ಯಗಳನ್ನು ಅವರಿಗೆ ನೇರವಾಗಿ ತಲುಪಿಸುವ ಹೊಣೆಗಾರಿಕೆ ಅಧಿಕಾರಿಗಳ ಮೇಲಿದೆ ಎಂದು ಅವರು ಹೇಳಿದರು.

