ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ದಾಖಲೆ ಕಾಣಿಕೆ ಸಂಗ್ರಹ
Friday, January 30, 2026
ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ಕಾಣಿಕೆ ಹುಂಡಿಯಲ್ಲಿ ಜ.29ರಂದು ಒಟ್ಟು 1,39,28,383 ರೂಪಾಯಿ ನಗದು ಸಂಗ್ರಹವಾಗಿದೆ. ಇದಲ್ಲದೆ 350 ಗ್ರಾಂ ಚಿನ್ನ ಹಾಗೂ 1,670 ಗ್ರಾಂ ಬೆಳ್ಳಿ ಕೂಡ ದೊರೆತಿದೆ.
ಕಳೆದ ತಿಂಗಳು ಕಾಣಿಕೆ ಹುಂಡಿಯಲ್ಲಿ 1,64,45,384 ರೂಪಾಯಿ ನಗದು, 695 ಗ್ರಾಂ ಚಿನ್ನ ಮತ್ತು 2,985 ಗ್ರಾಂ ಬೆಳ್ಳಿ ಸಂಗ್ರಹವಾಗಿತ್ತು. ಈ ಮೂಲಕ ಕಳೆದ ಎರಡು ತಿಂಗಳಲ್ಲಿ ಒಟ್ಟಾರೆ 3,03,73,767 ರೂಪಾಯಿ ನಗದು ಕಾಣಿಕೆ ಸಂಗ್ರಹವಾಗಿದ್ದು, ಇದು ದಾಖಲೆ ಮಟ್ಟದ ಸಂಗ್ರಹವಾಗಿದೆ.
ವಾರಾಂತ್ಯ ರಜೆಗಳು ಹಾಗೂ ವಿವಿಧ ಹಬ್ಬ-ರಜೆಗಳ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದ ಕೊಲ್ಲೂರಿಗೆ ಪ್ರತಿದಿನ ಕನಿಷ್ಠ 15 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ ಶ್ರೀದೇವಿಯ ದರ್ಶನ ಪಡೆದಿದ್ದಾರೆ. ವಿಶೇಷವಾಗಿ ಜನವರಿ ತಿಂಗಳಲ್ಲಿ ಪ್ರತಿದಿನವೂ 20 ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳು ದೇಗುಲಕ್ಕೆ ಭೇಟಿ ನೀಡಿದ್ದರು ಎಂದು ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಮಾಹಿತಿ ನೀಡಿದ್ದಾರೆ.