ಫೆ. 10: ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಆರೋಗ್ಯ ಹಕ್ಕಿನ ಜಾಥಾ
ರಾಜ್ಯದಲ್ಲಿ ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ಪ್ರಯತ್ನವನ್ನು ವಿರೋಧಿಸಿ, ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಕೊರಗರು ಸೇರಿದಂತೆ ಬಡವರಿಗೆ ಉಚಿತ ಹಾಗೂ ಉತ್ತಮ ಗುಣಮಟ್ಟದ ಚಿಕಿತ್ಸೆ, ಔಷಧ ದೊರೆಯುವಂತೆ ಹಾಗೂ ಕರ್ನಾಟಕದಲ್ಲಿ ಆರೋಗ್ಯ ಹಕ್ಕಿನ ಕಾಯ್ದೆ ಜಾರಿಗೊಳ್ಳಬೇಕೆಂದು ಒತ್ತಾಯಿಸಿ ಫೆ.10ರಂದು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ-ಕೇರಳ ಸೇರಿದಂತೆ ವಿವಿಧ ಸಂಘಟನೆಗಳು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಿವೆ ಎಂದು ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ ತಿಳಿಸಿದ್ದಾರೆ.
ಉಡುಪಿಯಲ್ಲಿ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಫೆ.2ರಿಂದ 17ರವರೆಗೆ ಆರೋಗ್ಯ ಹಕ್ಕಿನ ಜಾಥಾ ವಿವಿಧ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ನಡೆಯುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ ಫೆ.10ರಂದು ಜಾಥ ನಡೆಯಲಿದೆ. ಆರೋಗ್ಯ ಹಕ್ಕಿನ ಜಾಥಾ ಹಾಗೂ ಪ್ರತಿಭಟನೆಯಲ್ಲಿ ಒಕ್ಕೂಟವೂ ಸೇರಿದಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲೆ, ಜಿಲ್ಲಾ ಮಲೆಕುಡಿಯ ಸಂಘ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ, ಕರ್ನಾಟಕ ಪ್ರದೇಶ ಭಾರತೀಯ ಕಿಸಾನ್ ಸಂಘ ಉಡುಪಿ ಜಿಲ್ಲೆ, ಆಸರೆ ಸಂಸ್ಥೆ ಜನವಾದಿ ಮಹಿಳಾ ಸಂಘಟನೆ ಉಡುಪಿ ಜಿಲ್ಲೆ, ಡ್ರಗ್ ಆಕ್ಷನ್ ಫೋರಂ ಕರ್ನಾಟಕ ಸಂಘಟನೆಗಳ ಪಾಲ್ಗೊಳ್ಳಲಿವೆ ಎಂದರು. ಅಂದು ಬೆಳಗ್ಗೆ 11 ಗಂಟೆಗೆ ಮಣಿಪಾಲದ ಟೈಗರ್ ಸರ್ಕಲ್‌ನಿಂದ ಮೆರವಣಿಗೆಯಲ್ಲಿ ಜಿಲ್ಲಾದಿಕಾರಿ ಕಚೇರಿವರೆಗೆ ಸಾಗಿ ಅಲ್ಲಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯದ ಮನವಿಯನ್ನು ಅರ್ಪಿಸಲಾಗುವುದು ಎಂದು ಸುಶೀಲಾ ನಾಡ ತಿಳಿಸಿದರು.
ಆರೋಗ್ಯ ಹಕ್ಕಿನ ಜಾಥಾ ಹಲವು ಜನಪರ ಸಂಘಟನೆಗಳ ಗುಂಪಾಗಿದ್ದು, 2024ರ ಡಿಸೆಂಬರ್‌ನಲ್ಲಿ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಕಳಪೆ ಔಷಧದಿಂದ ಹಲವು ತಾಯಂದಿರುವ ಮರಣವನ್ನಪ್ಪಿದ ಬಳಿಕ ನಡೆಸಿದ ಆರೋಗ್ಯ ಹಕ್ಕಿನ ಜಾಥಾಕ್ಕೆ ಸರಕಾರದಿಂದ ಯಾವುದೇ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಈ ವರ್ಷ ಎಲ್ಲಾ 31 ಜಿಲ್ಲೆಗಳಲ್ಲೂ ಇದನ್ನು ಹಮ್ಮಿಕೊಳ್ಳಲಾಗಿದೆ ಎಂದರು. ತಮಿಳುನಾಡು, ಕೇರಳ ಹಾಗೂ ರಾಜಸ್ತಾನಗಳಲ್ಲಿ ಇರುವಂತೆ ಕರ್ನಾಟಕದ ಸರಕಾರಿ ಆಸ್ಪತ್ರೆಗಳಲ್ಲೂ ಎಲ್ಲರಿಗೂ ಉಚಿತ ಹಾಗೂ ಉತ್ತಮ ಗುಣಮಟ್ಟದ ಔಷಧಗಳು ಸಿಗುವಂತೆ ಈ ಜಾಥಾದ ಮೂಲಕ ಸರಕಾರವನ್ನು ಬಲವಾಗಿ ಒತ್ತಾಯಿಸಲಾಗುತ್ತಿದೆ. ಇತ್ತೀಚೆಗೆ ಸರಕಾರಿ ಆಸ್ಪತ್ರೆಗಳು ಖಾಸಗೀಕರಣ ಗೊಳ್ಳುವ ಸುದ್ದಿ ಜೋರಾಗಿ ಕೇಳಿ ಬರುತ್ತಿದ್ದು, ಪೂರಕವಾಗಿ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿಗಳು ಸಿಗದೇ ಖಾಸಗಿಯಿಂದ ಖರೀದಿಸುವಂತೆ ಒತ್ತಾಯಿಸಲಾಗುತ್ತಿದೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಕಾರ್ಯದರ್ಶಿ ಪುತ್ರನ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಸುಂದರ್ ಮಾಸ್ತರ್, ಶ್ಯಾಮರಾಜ್ ಬಿರ್ತಿ, ಮುಸ್ಲಿಂ ಒಕ್ಕೂಟದ ಇಕ್ಬಾಲ್ ಮನ್ನಾ ಉಪಸ್ಥಿತರಿದರು.