ಫೆ. 11: "ಕನ್ನಡ ಶಾಲೆ ಉಳಿಸಿ ಬೆಳೆಸಿ" ಅಭಿಯಾನದ ಬೃಹತ್ ಸಮಾವೇಶ
ಕನ್ನಡ ಭಾಷೆ ಮತ್ತು ಸರ್ಕಾರಿ ಕನ್ನಡ ಶಾಲೆಗಳ ಅಸ್ತಿತ್ವಕ್ಕಾಗಿ ನಿರಂತರ ಹೋರಾಟ ನಡೆಸುತ್ತಿರುವ ಕರ್ನಾಟಕ ರಾಜ್ಯ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನವು ತನ್ನ 75ನೇ ಸಂಭ್ರಮದ ಅಂಗವಾಗಿ ಫೆ. 11ರಂದು ಮಂಗಳೂರಿನಲ್ಲಿ ಬೃಹತ್ ರಾಜ್ಯ ಸಮಾವೇಶವನ್ನು ಹಮ್ಮಿಕೊಂಡಿದೆ ಎಂದು ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ಉಡುಪಿ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ. ಹರೀಶ್ ಜೋಷಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಮಂಗಳೂರಿನ ಪುರಭವನದಲ್ಲಿ 2 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಕನ್ನಡ ಶಾಲೆಯ ಉಳಿವಿಗಾಗಿ ಮೂಡಿಬಂದಿರುವ ಕ್ರಾಂತಿ ಗೀತೆಗಳಿಗೆ ನಾಡಿನ ಹೆಸರಾಂತ ಕಲಾತಂಡಗಳು ಹೆಜ್ಜೆ ಹಾಕಲಿವೆ. ಶಿಕ್ಷಣ ಕ್ಷೇತ್ರದಲ್ಲಿನ ತಾರತಮ್ಯವನ್ನು ಪ್ರಶ್ನಿಸುವ ಮತ್ತು ಕನ್ನಡದ ಅಸ್ಮಿತೆಯನ್ನು ಸಾರುವ ಈ ನೃತ್ಯ ವೈಭವವು ಜನರಲ್ಲಿ ಜಾಗೃತಿ ಮೂಡಿಸುವ ವಿಶೇಷ ಕಲಾ ಪ್ರದರ್ಶನವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ. ಖಾದರ್ ವಹಿಸಲಿದ್ದಾರೆ. ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಚಿವರಾದ ದಿನೇಶ್ ಗುಂಡೂರಾವ್, ಶಾಸಕರಾದ ಸುರೇಶ್ ಕುಮಾರ್ ಮತ್ತು ವೇದವ್ಯಾಸ ಕಾಮತ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ವಿಶೇಷ ಚೇತನ ವಿದ್ಯಾರ್ಥಿಗಳಿಗೆ ವೀಲ್ ಚೇರ್ ಹಾಗೂ ಶ್ರವಣ ಯಂತ್ರ ವಿತರಣೆ, ಸಾಧಕರಿಗೆ "ಕನ್ನಡ ರತ್ನ ಪ್ರಶಸ್ತಿ" ಪ್ರದಾನ ಹಾಗೂ ಗುರುವಂದನೆ ಹಾಗೂ ಪದಗ್ರಹಣ ಸಂಭ್ರಮ ಮತ್ತು ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ಉಡುಪಿ ಜಿಲ್ಲಾ ಸಮಿತಿ ಜಿಲ್ಲಾಧ್ಯಕ್ಷ ವಾಸುದೇವ ರಾವ್, ಗೀತಾಂಜಲಿ ಸುವರ್ಣ, ಗಂಗಾಧರ ಬಿರ್ತಿ, ಸಂಶುದ್ದೀನ್ ಮಜೂರು ಉಪಸ್ಥಿತರಿದ್ದರು.