ಕ್ಯಾನ್ಸರ್ ಜಾಗೃತಿಗಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ವತಿಯಿಂದ ಬೈಕ್ ಜಾಥಾ
ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ, ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲವು, ಮಣಿಪಾಲ ಆಟೋ ಕ್ಲಬ್, ಉಡುಪಿ ಜಾವಾ–ಯೆಜ್ಡಿ ಮೋಟಾರ್‌ಸೈಕಲ್ ಕ್ಲಬ್, ರಾಯಲ್ ಎನ್‌ಫೀಲ್ಡ್ ರೈಡರ್ಸ್ ಉಡುಪಿ ಹಾಗೂ ಆಭರಣ ಮೋಟಾರ್ಸ್, ಉಡುಪಿ ಇವರ ಸಹಯೋಗದೊಂದಿಗೆ “ನಾವು ಒಟ್ಟಾಗಿ ಕ್ಯಾನ್ಸರ್ ವಿರುದ್ಧ ಜೀವನಕ್ಕಾಗಿ ಸವಾರಿ ಮಾಡುತ್ತೇವೆ” ಎಂಬ ದ್ಯೇಯದೊಂದಿಗೆ ಬೈಕ್ ರಾಲಿ ಯನ್ನು ಆಯೋಜಿಸಿತು.
ಕ್ಯಾನ್ಸರ್ ತಡೆಗಟ್ಟುವಿಕೆ, ಆರಂಭಿಕ ಪತ್ತೆ ಹಾಗೂ ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ಸಾರ್ವಜನಿಕರ ಒಗ್ಗಟ್ಟಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.
ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹಾಗೂ ಮಣಿಪಾಲ ಹೆಲ್ತ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ (MHEPL) ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಲೀಪ್ ಜೋಸ್ ಬೈಕ್ ರಾಲಿಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಬಳಿ ಹಸಿರು ನಿಶಾನೆ ತೋರಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಾ. ಸುಧಾಕರ್ ಕಂಟಿಪುಡಿ, ಕ್ಯಾನ್ಸರ್ ಪ್ರಕರಣಗಳ ಹೆಚ್ಚಳದ ಬಗ್ಗೆ ಆತಂಕ ವ್ಯಕ್ತಪಡಿಸಿ, ಜಾಗೃತಿ, ನಿಯಮಿತ ತಪಾಸಣೆ ಹಾಗೂ ಜೀವನಶೈಲಿ ಬದಲಾವಣೆಯ ಅಗತ್ಯವನ್ನು ಒತ್ತಿ ಹೇಳಿದರು. ಇಂತಹ ಜಾಥಾಗಳ ಮೂಲಕ ಆಸ್ಪತ್ರೆಯ ಮಿತಿಯನ್ನು ಮೀರಿ ಸಮಾಜದೊಳಗೆ ಆರೋಗ್ಯ ಸಂದೇಶವನ್ನು ತಲುಪಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ವೈದ್ಯಕೀಯ ಆಂಕಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಅನಂತ್ ಪೈ ಅವರು ವಿಶ್ವ ಕ್ಯಾನ್ಸರ್ ದಿನದ ಮಹತ್ವದ ಕುರಿತು ಮಾಹಿತಿ ನೀಡಿ, ಜಾಗೃತಿ, ಆರಂಭಿಕ ಪತ್ತೆ ಮತ್ತು ಕ್ಯಾನ್ಸರ್ ಚಿಕಿತ್ಸೆಯ ಇತ್ತೀಚಿನ ಪ್ರಗತಿಗಳ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಈ ಬೈಕ್ ರಾಲಿಯಲ್ಲಿ 100ಕ್ಕೂ ಹೆಚ್ಚು ಬೈಕ್ ಸವಾರರು ಉತ್ಸಾಹದಿಂದ ಭಾಗವಹಿಸಿದ್ದು, ಜಾಥವು ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದಿಂದ ಹೊರಟು ಉಡುಪಿ ಮುಖ್ಯ ರಸ್ತೆಯ ಮೂಲಕ ಕಿನ್ನಿಮುಲ್ಕಿ ಸ್ವಾಗತ ಗೋಪುರದವರೆಗೆ ಹಾಗೂ ಮರುಕಳಿಸಿ ಕಸ್ತೂರ್ಬಾ ಆಸ್ಪತ್ರೆಗೆ ಸಾಗಿ ಬಂತು.

