ಮೃತ ಪತ್ರಿಕಾ ವಿತರಕನ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ ಸಮಾಜಸೇವಕ ವಿಶು ಶೆಟ್ಟಿ(Video)
1 ವರ್ಷದ ಹಿಂದೆ ಅಪಘಾತದಲ್ಲಿ ಮೃತಪಟ್ಟ ಪತ್ರಿಕಾ ವಿತರಕನ ಕುಟುಂಬ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವುದನ್ನು ಮನಗಂಡ ಸಮಾಜಸೇವಕ ವಿಶು ಶೆಟ್ಟಿ ಅವರು, ತನಗೆ ಲಭಿಸಿದ್ದ ಸನ್ಮಾನದ ಗೌರವಧನವನ್ನು ಸಂತ್ರಸ್ತ ಕುಟುಂಬಕ್ಕೆ ನೀಡಿ ಮಾನವೀಯತೆಗೆ ಮಾದರಿಯಾಗಿದ್ದಾರೆ.
ಅಂಬಲಪಾಡಿ ನಿವಾಸಿ ಪತ್ರಿಕಾ ವಿತರಕ ಸುರೇಶ್ ಆಚಾರ್ (33) ಅವರು ಪತ್ರಿಕಾ ವಿತರಕರಾಗಿ ಸೇವೆ ಸಲ್ಲಿಸುವ ಜೊತೆಗೆ, ಉಳಿದ ಸಮಯದಲ್ಲಿ ವಿವಿಧ ಕೆಲಸಗಳನ್ನು ಮಾಡಿಕೊಂಡು ಕುಟುಂಬವನ್ನು ಪೋಷಿಸುತ್ತಿದ್ದರು. ಕಳೆದ ವರ್ಷ ಮನೆಯೊಂದರ ಮಾಡಿನ ಕೆಲಸ ಮಾಡುವ ವೇಳೆ ಆಯತಪ್ಪಿ ಬಿದ್ದು ಮೃತಪಟ್ಟಿದ್ದು, ಕುಟುಂಬದ ಆಧಾರಸ್ತಂಭವಾಗಿದ್ದ ಅವರ ಅಕಾಲಿಕ ಸಾವು ಕುಟುಂಬಕ್ಕೆ ಭಾರೀ ಆಘಾತ ನೀಡಿತ್ತು. ಇದರೊಂದಿಗೆ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು.
ಸುರೇಶ್ ಆಚಾರ್ ಅವರ ನಿಧನಕ್ಕೆ ಒಂದು ವರ್ಷ ತುಂಬುತ್ತಿರುವ ಸಂದರ್ಭದಲ್ಲೇ ಕುಟುಂಬದ ದಯನೀಯ ಸ್ಥಿತಿಯನ್ನು ಅರಿತ ವಿಶು ಶೆಟ್ಟಿ ಅವರು ಮನೆಗೆ ಭೇಟಿ ನೀಡಿ, ಕತಾರ್‌ನಲ್ಲಿ ನಡೆದ ಬಂಟೋತ್ಸವ ಕಾರ್ಯಕ್ರಮದಲ್ಲಿ ತಮ್ಮನ್ನು ಸನ್ಮಾನಿಸಿದ ವೇಳೆ ಲಭಿಸಿದ ಗೌರವಧನವನ್ನು ಕುಟುಂಬಕ್ಕೆ ನೀಡಲು ಮುಂದಾಗಿದ್ದಾರೆ. ಗೌರವಧನವಾದ 25 ಸಾವಿರ ರೂಪಾಯಿಗೆ ಹೆಚ್ಚುವರಿಯಾಗಿ 15 ಸಾವಿರ ರೂಪಾಯಿಯನ್ನು ಸೇರಿಸಿ ಒಟ್ಟು 40 ಸಾವಿರ ರೂಪಾಯಿಯನ್ನು ನೀಡಿದರು. ಅಂಬಲಪಾಡಿಯ ನಿವೃತ್ತ ವಿಜಯ ಬ್ಯಾಂಕ್ ಅಧಿಕಾರಿ ಸದಾನಂದ ಶೆಟ್ಟಿ ಅವರು ಈ ಕಾರ್ಯದಲ್ಲಿ ಕೈ ಜೋಡಿಸಿ 10 ಸಾವಿರ ರೂಪಾಯಿಯನ್ನು ಸೇರಿಸಿ ಸಹಕಾರ ನೀಡಿದ್ದಾರೆ. ಹೀಗೆ ಒಟ್ಟು 50 ಸಾವಿರ ರೂಪಾಯಿಯನ್ನು ಸಂಕಷ್ಟದಲ್ಲಿರುವ ಕುಟುಂಬಕ್ಕೆ ಹಸ್ತಾಂತರಿಸುವ ಮೂಲಕ ವಿಶು ಶೆಟ್ಟಿ ಅವರು ಮಾನವೀಯತೆ ಮೆರೆದಿದ್ದಾರೆ.