ಕಲ್ಲುಕೊರೆಯ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ
Thursday, March 19, 2026
ಬ್ರಹ್ಮಾವರ ತಾಲೂಕಿನ ವಡ್ಡರ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗರಿಕೆ ಮಠದಲ್ಲಿ ಪಾಳುಬಿದ್ದ ಕಲ್ಲುಕೋರೆಯ ನೀರಿನಲ್ಲಿ ಈಜಲು ತೆರಳಿ ನೀರು ಪಾಲಾದ ಯುವಕನ ಶವವನ್ನು ಈಶ್ವರ ಮಲ್ಪೆ ಅವರ ತಂಡ ಪತ್ತೆ ಹಚ್ಚಿದೆ.
ತಮಿಳುನಾಡು ಮೂಲದ ಅರುಣ್ (38) ಎಂಬ ಕಾರ್ಮಿಕ ಈ ದುರ್ಘಟನೆಯಲ್ಲಿ ಮೃತಪಟ್ಟವರಾಗಿದ್ದು, ಸ್ಥಳೀಯ ರಾಜ ಎಂಬವರ ಬಳಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಗುರುವಾರ ಮಧ್ಯಾಹ್ನ ಗರಿಕೆ ಮಠದ ಬಳಿಯಿರುವ ಆಳವಾದ ಕಲ್ಲುಕೋರೆಗೆ ಈಜಲು ಇಳಿದ ಅರುಣ್, ನೀರಿನ ಆಳ ತಿಳಿಯದೆ ಮುಳುಗಿದ್ದಾರೆ ಎಂದು ತಿಳಿದುಬಂದಿದೆ. ಸುಮಾರು 30 ಅಡಿಗಿಂತ ಹೆಚ್ಚು ಆಳವಿರುವ ಈ ಕೋರೆಯಲ್ಲಿ ಮೃತದೇಹವನ್ನು ಪತ್ತೆಹಚ್ಚುವುದು ಸ್ಥಳೀಯರಿಗೆ ಕಷ್ಟವಾಗಿತ್ತು. ಸುದ್ದಿ ತಿಳಿದ ಈಶ್ವರ ಮಲ್ಪೆ ಹಾಗು ಅವರ ತಂಡ ಆಗಮಿಸಿ ಕಾರ್ಯಾಚರಣೆ ನಡೆಸಿ ಶವವನ್ನು ಮೇಲಕ್ಕೆತ್ತಿದ್ದಾರೆ. ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.