-->
ಅಂಬಾತನಯ ಮುದ್ರಾಡಿ ಸಂಸ್ಮರಣಾ ಪುಸ್ತಕ ಪ್ರಶಸ್ತಿಗೆ ನಾಟಕ ವಿಮರ್ಶಾ ಕೃತಿ ಆಹ್ವಾನ (Video)

ಅಂಬಾತನಯ ಮುದ್ರಾಡಿ ಸಂಸ್ಮರಣಾ ಪುಸ್ತಕ ಪ್ರಶಸ್ತಿಗೆ ನಾಟಕ ವಿಮರ್ಶಾ ಕೃತಿ ಆಹ್ವಾನ (Video)


ಅಧ್ಯಾಪಕ, ಕವಿ, ಲೇಖಕ, ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥದಾರಿ, ಕೀರ್ತಿಶೇಷ ಅಂಬಾತನಯ ಮುದ್ರಾಡಿಯವರ ಸಂಸ್ಮರಣೆಯಲ್ಲಿ ಉಡುಪಿ ರಂಗಭೂಮಿಯು ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸಹಯೋಗದಲ್ಲಿ ಕೊಡಮಾಡುವ ಅಂಬಾತನಯ ಮುದ್ರಾಡಿ ಸಂಸ್ಮರಣಾ ಪುಸ್ತಕ ಪ್ರಶಸ್ತಿಗೆ ನಾಟಕ ವಿಮರ್ಶಾ ಕೃತಿಗಳನ್ನು ಆಹ್ವಾನಿಸಿದೆ ಎಂದು ಅಂಬಾತನಯ ಮುದ್ರಾಡಿ ಸಂಸ್ಮರಣಾ ಪುಸ್ತಕ ಪ್ರಶಸ್ತಿ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ತಿಳಿಸಿದ್ದಾರೆ. 

ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.  ಅಂಬಾತನಯ ಮುದ್ರಾಡಿಯವರ ಹೆಸರಿನ ಪುಸ್ತಕ ಪ್ರಶಸ್ತಿಯನ್ನು ಕಳೆದ ಎರಡು ವರ್ಷಗಳಿಂದ ನೀಡುತ್ತಾ ಬಂದಿದೆ. 'ಅಂಬಾತನಯ ಮುದ್ರಾಡಿಯವರ ಸಂಸ್ಕರಣೆಯ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸಹಯೋಗದ ಉಡುಪಿ ರಂಗಭೂಮಿ ಪುರಸ್ಕಾರ' ಎಂದು ಕರೆಯಲ್ಪಡುವ ಈ ಪುಸ್ತಕ ಪ್ರಶಸ್ತಿಯು ಪ್ರತಿವರ್ಷ ಸಾರ್ವಜನಿಕ ಸಮಾರಂಭದಲ್ಲಿ ಪ್ರದಾನಗೊಳ್ಳಲಿದ್ದು, ಪ್ರಶಸ್ತಿ ಪತ್ರ, ಸ್ಮರಣಿಕೆ. ಹಾಗೂ ಹದಿನೈದು ಸಾವಿರ ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿರುತ್ತದೆ.

ಮೊದಲ ವರ್ಷ, ಹಿಂದಿನ ಎರಡು ವರ್ಷಗಳಲ್ಲಿ ಪ್ರಕಟವಾದ ರಂಗಭೂಮಿಗೆ ಪ್ರಸ್ತುತವಾದ ಗಂಭೀರ ಚಿಂತನೆಯ ನಾಟಕೇತರ ಸಾಹಿತ್ಯಕೃತಿಗಳನ್ನೂ ಎರಡನೆಯ ವರ್ಷ, ಹಿಂದಿನ ಎರಡು ವರ್ಷಗಳಲ್ಲಿ ಪ್ರಕಟವಾದ ನಾಟಕ ಕೃತಿಗಳನ್ನೂ ಆಹ್ವಾನಿಸಿ, ರಂಗತಜ್ಞರ ನೆರವಿನಿಂದ ಅತ್ಯುತ್ತಮ ಕೃತಿಗಳನ್ನು ಗುರುತಿಸಿ ಈ ಪುರಸ್ಕಾರವನ್ನು ನೀಡಲಾಗಿತ್ತು. ಮೊದಲ ವರ್ಷದ ಪುಸ್ತಕ ಪ್ರಶಸ್ತಿಯನ್ನು ಮೌನೇಶ ಬಡಿಗೇರರ 'ಅಭಿನಯ ಕಲಿಸಲು ಸಾಧ್ಯವಿಲ್ಲ' ಎಂಬ ವಿಮರ್ಶಾ ಕೃತಿಗೂ ಎರಡನೆಯ ವರ್ಷದ ಪುಸ್ತಕ ಪ್ರಶಸ್ತಿಯನ್ನು ಎನ್ ಸಿ ಮಹೇಶ್ ರವರ 'ಸಾಕು ತಂದೆ ರೂಮಿ' ಎಂಬ ನಾಟಕ ಕೃತಿಗೂ ನೀಡಲಾಗಿತ್ತು.

ಮೂರನೆಯ ವರ್ಷದ (2026ರ) ಸಾಲಿನ ಪುಸ್ತಕ ಪುರಸ್ಕಾರಕ್ಕೆ ಹಿಂದಿನ ಎರಡು ವರ್ಷಗಳಲ್ಲಿ ಎಂದರೆ 2024, ಮತ್ತು 2025ರಲ್ಲಿ ಪ್ರಥಮ ಆವೃತ್ತಿಯಲ್ಲಿ ಪ್ರಕಟವಾದ, ನಾಟಕ ರಂಗಕ್ಕೆ ಸಂಬಂಧಿಸಿದ ವಿಮರ್ಶಾ ಕೃತಿಗಳನ್ನು ಆಹ್ವಾನಿಸುತ್ತಿದ್ದೇವೆ. 2024 ಮತ್ತು 2025 ಈ ಎರಡು ವರ್ಷಗಳಲ್ಲಿ ಪ್ರಕಟವಾದ ನಾಟಕ ರಂಗಕ್ಕೆ ಸಂಬಂಧಿಸಿದ ವಿಮರ್ಶಾ ಕೃತಿಗಳ ಮೂರು ಪ್ರತಿಗಳನ್ನು ಲೇಖಕ/ ಪ್ರಕಾಶಕರು/ ರಂಗಕರ್ಮಿಗಳು/ ಅಥವಾ ರಂಗಾಸಕ್ತರು ಸ್ಪರ್ಧೆಯ ಸಂಚಾಲಕರಾದ ಬೆಳಗೋಡು ರಮೇಶ ಭಟ್. 'ದಕ್ಷಿಣ ಕಾಶಿ' (ಡಿ-1), ಎರಡನೆಯ ಮುಖ್ಯರಸ್ತೆ, ವಾಣಿ ವಿಲಾಸ್ ಮೊಹಲ್ಲಾ, ಮೈಸೂರು - 570 002 (ಮೊಬೈಲ್ 9341091821) ಈ ವಿಳಾಸಕ್ಕೆ ಏಪ್ರಿಲ್ 30, 2026 ರ ಒಳಗೆ ತಲುಪುವಂತೆ ಕಳುಹಿಸಿ ಕೊಡಬಹುದು ಎಂದು ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ರಂಗಭೂಮಿಯ ಅಧ್ಯಕ್ಷ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ, ರಂಗಭೂಮಿಯ ಉಪಾಧ್ಯಕ್ಷರುಗಳಾದ  ಭಾಸ್ಕರ್ ರಾವ್ ಕಿದಿಯೂರು,  ಎನ್. ರಾಜಗೋಪಾಲ ಬಲ್ಲಾಳ್ ಉಪಸ್ಥಿತರಿದ್ದರು.




 

Ads on article

Advertise in articles 1

advertising articles 2

Advertise under the article