ಎ. 26: ಡಾ. ಬಿ.ಆರ್ ಅಂಬೇಡ್ಕರ್ 135 ನೇ ಜನ್ಮ ದಿನದ ಪ್ರಯುಕ್ತ ದೇಶಾಭಿಮಾನ ಅಭಿಯಾನ
Thursday, April 23, 2026
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇದರ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆ ಅಂಗವಾಗಿ ದೇಶಾಭಿಮಾನ ಅಭಿಯಾನವನ್ನು ಎ. 26ರಂದು ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ವಸಂತ ಗಿಳಿಯಾರ್ ತಿಳಿಸಿದ್ದಾರೆ.
ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಉಡುಪಿಯ ಬೋರ್ಡ್ ಹೈಸ್ಕೂಲ್ ನಲ್ಲಿ ಸಂಜೆ 3.30ಕ್ಕೆ ಜಾಥಾಕ್ಕೆ ಚಾಲನೆ ಸಿಗಲಿದೆ. ಜಿಲ್ಲಾಧಿಕಾರಿ ಸ್ವರೂಪ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರಿರಾಮ ಶಂಕರ್ ಅವರು ಸಾಂಸ್ಕೃತಿಕ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. ಹತ್ತಕ್ಕೂ ಹೆಚ್ಚು ಟ್ಯಾಬ್ಲೋಗಳು ದೇಶ ಭಕ್ತಿ ಬಿಂಬಿಸುವ ಕಲಾತಂಡಗಳು ಇರಲಿದೆ. ಜನರಲ್ಲಿ ದೇಶಾಭಿಮಾನವನ್ನು ಉದ್ದೀಪನಗೊಳಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 5ರಿಂದ ಆರು ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಉಡುಪಿಯ ಮಿಷನ್ ಕಂಪೌಂಡ್ ನ ಕ್ರಿಶ್ಚಿಯನ್ ಕಾಲೇಜಿನ ಮೈದಾನದಲ್ಲಿ ನಟ ದುನಿಯಾ ವಿಜಯ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಮಾಜ ಸೇವಕ ಡಾ. ಎಚ್.ಎಸ್ ಶೆಟ್ಟಿ ಇವರಿಗೆ ಭೀಮ ಸಾರಥಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅಲ್ಲದೇ ಎಸ್ಎಸ್ ಎಲ್ ಸಿಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇದರ ಸುಂದರ್ ಮಾಸ್ತರ್,ಶ್ಯಾಮರಾಜ ಬಿರ್ತಿ, ಸಹಭಾಳ್ವೆ ಸಂಘಟನೆಯ ಫಣಿರಾಜ್, ಕ್ಯಾಥೋಲಿಕ್ ಸಭಾದ ಮೆಲ್ವಿನ್ ಅರನ್ಹಾ, ರಥಬೀದಿ ಗೆಳೆಯರು ಇದರ ನಾಗೇಶ್ ಕುಮಾರ್ ಉದ್ಯಾವರ, ಮುಸ್ಲಿಂ ಒಕ್ಕೂಟದ ಇರ್ಶಾದ್ ನೇಜಾರ್, ಇಕ್ಬಾಲ್ ಹುಸೈನ್ ಕಟ್ಪಾಡಿ, ಅಲ್ಪ ಸಂಖ್ಯಾತರ ವೇದಿಕೆ ಚಾರ್ಲ್ಸ್ ಯಾಂಬ್ಲರ್, ಸಿಐಟಿಯು ಇದರ ಕವಿರಾಜ್ ಮೊದಲಾದವರು ಉಪಸ್ಥಿತರಿದ್ದರು.
